ಕೊಡಗು ಬ್ಯಾರೀಸ್ ವೆಲ್‌ಫೇರ್ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ

ಮಡಿಕೇರಿ ಜೂ.5 : ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್‌ನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಮಡಿಕೇರಿಯ ಕ್ರೆಸೆಂಟ್ ಶಾಲೆಯಲ್ಲಿ ನಡೆ ಯಿತು. ಈ ಸಂದರ್ಭ 31 ವಿದ್ಯಾರ್ಥಿ ಪ್ರತಿಭೆಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ಮಡಿಕೇರಿ ಕ್ರೆಸೆಂಟ್ ಶಾಲೆಯಲ್ಲಿ ನಡೆದ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್‌ನ ವಾರ್ಷಿಕೊತ್ಸವ ಹಾಗೂ ಪ್ರತಿಭಾ ಪುರಸ್ಕರ ಸಮಾರಂಭವನ್ನು ಸ್ಥಳೀಯ ದೃಶ್ಯವಾಹಿನಿ ಚಿತ್ತಾರದ ಸಂಪಾದಕಿ ಸವಿತಾ ರೈ ಉದ್ಘಾಟಿಸಿದರು. ಟ್ರಸ್ಟ್‌ನ ಅಧ್ಯಕ್ಷ ಬಿ.ಎ. ಸಂಶುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಸಕ್ತ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 31 ಬ್ಯಾರಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಹಾಗೂ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ವಿತರಿಸಿದರು. ವಾಣಿಜ್ಯ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕಗಳಿಸಿದ ಮಡಿಕೇರಿಯ ಶರಾಫತ್ ಸನಾ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಫೆಲೋಶಿಫ್ ಪಡೆದ ಫಹೀಮಾ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಜರಗಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಕ್ರೆಸೆಂಟ್ ಶಾಲೆಯ ಮುಖ್ಯಸ್ಥ ಜಿ.ಚ್. ಮುಹಮ್ಮದ್ ಹನೀಫ್ ಬಹು ಮಾನಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷರಾದ ಎಂ.ಬಿ. ನಾಸಿರ್‌ಅಹ್ಮದ್, ಮುನೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಎಂ.ಇ. ಮುಹಮ್ಮದ್, ಬಿ.ಎಸ್. ರಫೀಕ್ ಅಹ್ಮದ್, ಅಬ್ದುಲ್ಲಾ ಹಾಗೂ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.





