ಅರಣ್ಯ ನಾಶದಿಂದ ಬರಗಾಲ ಖಚಿತ: ಬಿ.ಸಿ. ಚಂದ್ರಶೇಖರ್
ಶಿಕಾರಿಪುರ, ಜೂ.5: ಸ್ವಾರ್ಥಕ್ಕಾಗಿ ಗೊತ್ತುಗುರಿಯಿಲ್ಲದೆ ಬೇಕಾಬಿಟ್ಟಿಯಾಗಿ ಅರಣ್ಯನಾಶದಿಂದ ಬರಗಾಲ ಆವರಿಸಿ ಜನತೆ ತತ್ತರಿಸಿದ್ದು, ಪ್ರಕೃತಿ ಮುನಿಸಿಕೊಂಡಲ್ಲಿ ಮನುಷ್ಯ ಬದುಕುವುದು ಅಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ್ ತಿಳಿಸಿದರು.
ರವಿವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾ.ವಕೀಲರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಅರಣ್ಯ ಇಲಾಖೆಯ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ದಾರ್ಶನಿಕರ ಜಯಂತಿಯನ್ನು, ಮನುಷ್ಯನ ಬದುಕಿಗೆ ಅನಿವಾರ್ಯವಾದ ಪರಿಸರ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಗಾಗಿ ಪರಿಸರ ದಿನಾಚರಣೆಯನ್ನು ಆಚರಿಸ ಲಾಗುತ್ತಿದೆ ಎಂದರು. ಪ್ರತಿಯೊಬ್ಬರೂ ಕನಿಷ್ಠ ಮನೆಯ ಸುತ್ತಮುತ್ತ ಗಿಡನೆಟ್ಟು ಪೋಷಿಸುವ ಪ್ರಾಮಾಣಿಕ ಸಂಕಲ್ಪ ಕೈಗೊಂಡು ಭಗೀರಥರಾಗಬೇಕಾಗಿದೆ. ಪ್ರಕೃತಿ ಮೂಲಕ ದೊರೆಯುವ ಹಣ್ಣುಗಳನ್ನು ಸೇವಿಸಿ ಬೀಜಗಳನ್ನು ಖಾಲಿ ಜಾಗದಲ್ಲಿ ಬಿಸಾಡುವ ಕನಿಷ್ಠ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಿ ಪ್ರಸನ್ನಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ಭಾವಿಸದೆ ಅರಣ್ಯ ನಾಶ ತಡೆಗಟ್ಟುವ ಕಾರ್ಯಕ್ಕೆ ಕಡಿವಾಣ ಹಾಕಬೇಕಿದೆ. ಈ ಮೂಲಕ ಸಾಮಾಜಿಕ ಸ್ವಾಸ್ಥ ಕಾಪಾಡಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಎಪಿಎಂಸಿ ಆವರಣದಲ್ಲಿ ವಿವಿಧ ತಳಿಯ ಸಸಿಗಳನ್ನು ನ್ಯಾಯಾ ಧೀಶರು ನೆಟ್ಟರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಫಾರೂಕ್ ಝಾರೆ, ಹಿರಿಯ ನ್ಯಾಯವಾದಿ ಕೊಟ್ರೇಶಪ್ಪ, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ಶಫಿ ಅರ್ಮಾನ್, ವಲಯ ಅರಣ್ಯಾಧಿಕಾರಿ ಪ್ರಭಾಕರ್, ಅಮರೇಶ, ವರ್ತಕರ ಸಂಘದ ಅಧ್ಯಕ್ಷ ಗುಡ್ಡಪ್ಪ, ಎಪಿಎಂಸಿ ಸದಸ್ಯ ಸುಕೇಂದ್ರಪ್ಪ, ಡಿ.ಎಲ್ ಬಸವರಾಜ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ ಸ್ವಾಗತಿಸಿದರು.ಸಿದ್ದರಾಜು ನಿರೂಪಿಸಿ ವಂದಿಸಿದರು.







