ಶಿವಮೊಗ್ಗ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ
ಶಿವಮೊಗ್ಗ, ಜೂ. 5: ಮಹಾನಗರ ಪಾಲಿಕೆಯು ಶಿವಮೊಗ್ಗ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಪಾಲಿಕೆಯ ಮಹಾಪೌರರು ಹಾಗೂ ಆಯುಕ್ತರು ತಿಳಿಸಿರುತ್ತಾರೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದು, ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿ, ಒಳಚರಂಡಿಗಳ ಸರಾಗ ಹರಿವಿಕೆಗೆ ತಡೆಯನ್ನುಂಟು ಮಾಡುವುದರ ಜೊತೆಗೆ ಜಲ ಮಾಲಿನ್ಯಕ್ಕೂ ಕಾರಣವಾಗಿದೆ.
ಆದ್ದರಿಂದ ರಾಜ್ಯ ಸರಕಾರದ ಪರಿಸರ ಸಂರಕ್ಷಣಾ ಕಾಯ್ದೆಯನ್ವಯ ಯಾವುದೇ ವ್ಯಕ್ತಿ, ಅಂಗಡಿ ಮಾಲಕ, ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿ ಮತ್ತು ಮಾರಾಟಗಾರರು, ಯಾವುದೇ ದಪ್ಪದ ಪ್ಲಾಸ್ಟಿಕ್ ಆಧಾರಿತ ವಸ್ತುಗಳಾದ ಕ್ಯಾರಿ ಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ಸ್, ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಹಾಳೆ, ಪ್ಲಾಸ್ಟಿಕ್ ಆವರಿಸಿದ ಪೇಪರ್ ಲೋಟ ಹಾಗೂ ಥರ್ಮಕೋಲ್ ಮತ್ತು ಮೈಕ್ರೋಬೀಡ್ಸ್‌ನಿಂದ ತಯಾರಾದಂತಹ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ನಿಷೇಧಿಸಿದೆ. ವಿಶೇಷ ಆರ್ಥಿಕ ವಲಯಗಳಲ್ಲಿ, ಸಾಮಗ್ರಿಗಳ ಉತ್ಪಾದನಾ, ಸಂಸ್ಕರಣಾ ಘಟಕಗಳಲ್ಲಿ, ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಹಾಗೂ ಹಾಲು ಮತ್ತು ಹಾಲು ಉತ್ಪನ್ನಗಳ ಪ್ಯಾಕಿಂಗ್‌ಗಳಲ್ಲಿ ಸರಕಾರದಿಂದ ಮಾನ್ಯತೆ ಮೇರೆಗೆ ಪ್ಲಾಸ್ಟಿಕ್ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಈ ಸಾರ್ವಜನಿಕ ಪ್ರಕಟನೆಗೊಂಡ ದಿನಾಂಕದಿಂದ ಒಂದು ತಿಂಗಳೊಳಗಿನ ಕಾಲಾವಕಾಶದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳತಕ್ಕದ್ದು, ತಪ್ಪಿದ್ದಲ್ಲಿ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.







