ಅಮಾವಾಸ್ಯೆ ದಿನವೇ ದಾಂಪತ್ಯಕ್ಕೆ ಕಾಲಿಟ್ಟ 23 ಜೋಡಿ
ಚಿತ್ರದುರ್ಗ: ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ, ಜೂ. 5: ಅಮಾವಾಸ್ಯೆ ಹಾಗೂ ವಿಶ್ವ ಪರಿಸರ ದಿನ ವಾದ ಇಂದು ನವ ದಂಪತಿಗಳು ನಗರದ ಮುರುಘಾ ವನದಲ್ಲಿ ನೂರು ಸಸಿಗಳನ್ನು ನೆಡುವುದರ ಮೂಲಕ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ರವಿವಾರ ಇಲ್ಲಿನ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ 26 ವರ್ಷ ಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಡೆಸುತ್ತ ಬಂದಿದೆ. ಸಾವಿರಾರು ಕುಟುಂಬಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.
ಅನೇಕರು ಮದುವೆ ಮಾಡುವುದರಲ್ಲಿ ತಮ್ಮ ಜೀವನದಲ್ಲಿ ದುಡಿದದ್ದನ್ನು ವ್ಯಯಿಸಿ ನೆಮ್ಮದಿ ಕಳೆದುಕೊಳ್ಳುತ್ತಾರೆ. ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಂಡು ವಿವಾಹ ಆಗುವುದರಿಂದ ಸಮಾನತೆ, ಸಾಮರಸ್ಯದ ಆಲೋಚನೆಗಳು ನಮ್ಮಲ್ಲಿ ಮೇಳೈಸುತ್ತವೆ. ನಮ್ಮ ಪ್ರಾಂತದಲ್ಲಿ ಮಾತ್ರವಲ್ಲ ಎಲ್ಲ ಕಡೆಯು ಪ್ರೇಮ ವಿವಾಹಕ್ಕೆ ಅಡ್ಡಿ ಆತಂಕಗಳು. ಹಾಗೆ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಒಂದು ಜೀವ ಹೋದರೆ ಯಾರು ಜವಾಬ್ದಾರರು. ಈ ಸಂದರ್ಭದಲ್ಲಿ ಮಾನವೀಯವಾಗಿ ನಡೆದುಕೊಳ್ಳಬೇಕು. ಜೀವನ, ಭಾವನೆ, ಪ್ರೀತಿ ಇವುಗಳ ಬೆಲೆ ಅರ್ಥ ಮಾಡಿಕೊಳ್ಳಬೇಕು. ಸಮಾಜದೊಟ್ಟಿಗೆ ಅವರನ್ನು ಬದಕಲು ಬಿಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿ.ಜಿ.ಕೆರೆ ಗ್ರಾಮದ ನೇತ್ರಾವತಿ ಮತ್ತು ಗುರುಸ್ವಾಮಿ ಇದಕ್ಕೊಂದು ಸಾಕ್ಷಿಯಾದರು. ನೇತ್ರಾವತಿಗೆ ಕಾರಣಾಂತ ರಗಳಿಂದ ಎರಡು ಕಾಲು ಹಾಗೂ ಸೊಂಟ ಮುರಿದಿದೆ. ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನಲ್ಲಿ ಬಂದು ಪ್ರೀತಿಸಿದ್ದ ಗುರುಸ್ವಾಮಿಯವರೊಂದಿಗೆ ಮುರುಘಾಮಠದ ರಾಜಾಂಗಣದಲ್ಲಿ ಸಾವಿರಾರು ಭಕ್ತರೊಂದಿಗೆ ಶ್ರೀಗಳ ಆಶೀರ್ವಾದ ಪಡೆದು ವಿವಾಹವಾದರು.
ಸಮ್ಮುಖ ವಹಿಸಿ ಮಾತನಾಡಿದ ಭಾಲ್ಕಿಯ ಬಸವರೇವಣಸಿದ್ಧ ಸ್ವಾಮಿ, ಇಂದಿನ ಕಾಲದಲ್ಲಿ ಭಿನ್ನ ರೀತಿಯ ವಿವಾಹಗಳಾಗುತ್ತಿದ್ದು, ಬೆಳಗ್ಗೆ ವಿವಾಹವಾದರೆ ಸಂಜೆ ವಿಚ್ಛೇದನ. ಇದಕ್ಕೆ ಕಾರಣಗಳು ಹಲವು. ಆದರೆ ಮುರುಘಾಮಠದಲ್ಲಿ 26 ವರ್ಷಗಳಿಂದ ಪ್ರತಿ ತಿಂಗಳು ವಿವಾಹ ಜರುಗುತ್ತವೆ. ಯಾರಿಗೂ ಏನೂ ಆಗಿಲ್ಲ. ಮನುಷ್ಯ ಪ್ರೀತಿ-ವಿಶ್ವಾಸದಿಂದ ಬದುಕನ್ನು ನಡೆಸಬೇಕು. ಅಂತಹ ಭದ್ರ ಬುನಾದಿಯನ್ನು ಶ್ರೀಮಠ ಹಾಕಿಕೊಟ್ಟಿದೆ ಎಂದು ಶ್ಲಾಘಿಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಚಿತ್ರದುರ್ಗದ ಉಪ ವಿಭಾಗಾಧಿಕಾರಿ ಟಿ. ರಾಘವೇಂದ್ರ ಮಾತನಾಡಿ, ಹಲವು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯವಾದ ಅನುಭವ ಮಂಟಪದಲ್ಲಿ ಸರಳ ವಿವಾಹಗಳು ನಡೆಯುತ್ತಿರುವುದು ನನಗೆ 12ನೆ ಶತಮಾನದ ಬಸವಾದಿ ಶರಣರ ಅನುಭವ ಮಂಟಪ ಜ್ಞಾಪಕಕ್ಕೆ ಬರುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಇದೇ ವೇಳೆ ರಾಜಕೀಯ ಮುಖಂಡ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ದಾಸೋಹ ಸೇವಾರ್ಥಿಗಳಾದ ರಂಗನಾಥ ಮೋಟಾರ್ಸ್‌ನ ಎಂ.ರವಿ ಕುಮಾರ್, ವೀರಶೈವ ಸಮಾಜದ ಕಾರ್ಯದರ್ಶಿ ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿಯ ಶಿವಕುಮಾರ್ ಮತ್ತು ಪರಿಶಿಷ್ಟ ಪಂಗಡದ ಅಕ್ಷತಾ ಅಂತರ್ಜಾತಿ ವಿವಾಹವಾದದ್ದು ಶೇಷವಾಗಿತ್ತು. ಒಟ್ಟು 23 ಜೋಡಿ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಸತಿ-ಪತಿಗಳಾಗಿ ಶ್ರೀಮಠದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.





