ಎನ್‌ಆರ್‌ಐ ಸೋದರರಿಬ್ಬರಿಗೆ 7 ವರ್ಷ ಜೈಲು
ವಾಶಿಂಗ್ಟನ್, ಜೂ.5: ಕಡಿಮೆ ವೆಚ್ಚದ ಕಾರ್ಮಿಕ ಶಕ್ತಿಯನ್ನು ಸೃಷ್ಟಿಸುವ ಉದ್ದೇಶ ಹೊಂದಿರುವ ಎಚ್1ಬಿ ವೀಸಾದಲ್ಲಿ ವಂಚನೆಯೆಸಗಿದಕ್ಕಾಗಿ ಭಾರತೀಯ ಮೂಲದ ಇಬ್ಬರು ಅಮೆರಿಕನ್ ಸಹೋದರರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 46 ವರ್ಷದ ಅತುಲ್ ನಂದಾ ಹಾಗೂ 45 ವರ್ಷ ವಯಸ್ಸಿನ ಜಯ್ ನಂದಾ ಅವರಿಗೆ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದರ ನ್ಯಾಯಾಧೀಶೆ ಬಾರ್ಬರಾ ಎಂ.ಜಿ.ಲಿನ್ ಜೈಲು ಶಿಕ್ಷೆಯನ್ನು ಘೋಷಿಸಿದ್ದಾರೆ.
ಇವರಿಬ್ಬರ ವಿರುದ್ಧ ವೀಸಾ ವಂಚನೆಯ ಸಂಚು, ವಿದೇಶಗಳಿಂದ ಅಕ್ರಮವಾಗಿ ಅಗಂತುಕರನ್ನು ದೇಶದೊಳಗೆ ತರಲು ಸಂಚು ನಡೆಸಿರುವುದು ಹಾಗೂ ಇಲೆಕ್ಟ್ರಾನಿಕ್ ವಂಚನೆಯ ಆರೋಪಗಳನ್ನು ಹೊರಿಸಲಾಗಿತ್ತು. ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಈ ಸಹೋದರರನ್ನು, ನ್ಯಾಯಾಲಯದ ತೀರ್ಪಿನ ಬಳಿಕ ಅಮೆರಿಕದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಟೆಕ್ಸಾಸ್ ಮೂಲ ಮಾಹಿತಿತಂತ್ರಜ್ಞಾನ ಕನ್ಸಲ್ಟಿಂಗ್ ಸಂಸ್ಥೆ ಡಿಲ್ಬೊನ್ ಸೊಲ್ಯೂಶನ್ಸ್‌ನಮಾಲಕರಾದ ನಂದಾ ಸಹೋದರರು, ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವ ವಿದೇಶಿ ಉದ್ಯೋಗಿಗಳನ್ನು ತಮ್ಮ ಸಂಸ್ಥೆಯಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದರು. ಅವರು ಈ ಉದ್ಯೋಗಿಗಳಿಗೆ ಎಚ್1-ಬಿ ವೀಸಾವನ್ನು ಪ್ರಾಯೋಜಿಸುತ್ತಿದ್ದರು. ಬಳಿಕ ಅವರನ್ನು ಅಮೆರಿಕದಾದ್ಯಂತದ ವಿವಿಧ ಕಂಪೆನಿಗಳಿಗೆ ಪೂರೈಕೆ ಮಾಡುತ್ತಿದ್ದರೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.





