‘3,000 ಗಿಡಗಳನ್ನು ನೆಟ್ಟು ನಗರ ಹಸಿರೀಕರಣ’

ಮಂಗಳೂರು, ಜೂ.5: ನಗರವನ್ನು ಹಸಿರೀಕರಣ ಗೊಳಿಸುವ ನಿಟ್ಟಿನಲ್ಲಿ ನಗರದ ರಸ್ತೆಗಳು, ಡಿವೈಡರ್‌ಗಳು ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ 3,000 ಗಿಡಗಳನ್ನು ನೆಡುವ ಕಾರ್ಯಕ್ರಮ ಸೋಮವಾರದಿಂದ ಈ ತಿಂಗಳ ಅಂತ್ಯದವರೆಗೆ ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ವಿಭಾಗ ಅರಣ್ಯ ಅಧಿಕಾರಿ ಕೆ.ಟಿ. ಹನುಮಂತಪ್ಪ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ವಿಶ್ವಪರಿಸರ ದಿನಾಚರಣೆ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ನಗರದ ಕದ್ರಿ ಪಾರ್ಕ್‌ನ ಬಾಲಭವನದ ಎದುರು ಶಾಸಕ ಜೆ.ಆರ್. ಲೋಬೊ ಚಾಲನೆ ನೀಡಿದ ಬಳಿಕ ಕೆ.ಟಿ. ಹನುಮಂತಪ್ಪ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಮಂಗಳೂರು ನಗರ ಹಸಿರೀಕರಣ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ ಪಡೀಲ್‌ನ ಅರಣ್ಯ ಇಲಾಖೆಯ ನರ್ಸರಿಯಲ್ಲಿ 1 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ವಿಶ್ವಪರಿಸರ ದಿನದ ಅಂಗವಾಗಿ ಮಂಗಳೂರು ವಿಭಾಗದಲ್ಲಿ ಎಂಆರ್‌ಪಿಎಲ್, ಎಂಸಿಎಫ್, ಭಾರತ್ ಪೆಟ್ರೋಲಿಯಂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ 4,500 ಗಿಡಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ರೈ ತರಿಗೆ ಪೋತ್ಸಾಹ ಧನದಲ್ಲಿ ಸಾಗುವಾನಿ, ಹಲಸು, ನೇರಳೆ ಮುಂತಾದ ಗಿಡಗಳನ್ನು ನೀಡಲಾಗು ತ್ತಿದೆ. ಗಿಡವೊಂದಕ್ಕೆ 3 ವರ್ಷಗಳಿಗೆ 45 ರೂ. ಗಳನ್ನು ರೈತರಿಗೆ ನೀಡಲಾಗುತ್ತಿದ್ದು, ಕಳೆದ ವರ್ಷ 2.80 ಲಕ್ಷ ಗಿಡಗಳ ಪೋಷಣೆಗಾಗಿ ರೈತರಿಗೆ 12 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶೆ ಪುಷ್ಪಾಂಜಲಿ ದೇವಿ, ನಾಲ್ಕನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಭವಾನಿ ನೇರಳೆ, ಆರನೆ ಹೆಚ್ಚುವರಿ ನ್ಯಾಯಾಧೀಶ ಪುಟ್ಟ ರಂಗಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲಣ್ಣ ಗೌಡ, ಜೆಎಂಎಫ್‌ಸಿ ನ್ಯಾಯಾಧೀಶರಾದ ಮಹೇಶ್ ಪಾಟೇಲ್, ಸಂತೋಷ ಕುಂದರ್, ಶಿಲ್ಪಾ, ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಟಿ.ಎನ್. ಗೋಧವರ್ಮನ್ ಪ್ರಕರಣದಿಂದ ಪರಿಸರಕ್ಕೆ ಹೆಚ್ಚಿನ ಒತ್ತು
ಪರಿಸರದ ಪರವಾಗಿ ಸುಪ್ರೀಂಕೋರ್ಟ್ ವರೆಗೂ ಹೋರಾಟ ನಡೆಸಿದ ಟಿ.ಎನ್.ಗೋಧವರ್ಮನ್ ತಿರುಮಲಪಾಡ್ ಪ್ರಕರಣವು ದೇಶಾದ್ಯಂತ ಪರಿಸರದ ಬಗ್ಗೆ ಕಾಳಜಿ ಹಾಗೂ ಒತ್ತು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಒಂದನೆ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದರು.
ಕೋಟಿ ವೃಕ್ಷ ಆಂದೋಲನದಲ್ಲಿ 2 ಲಕ್ಷ ಗಿಡ ನೆಡುವ ಯೋಜನೆ
ಜುಲೈ 2ರಿಂದ 8ವರೆಗೆ ರಾಜ್ಯಾದ್ಯಂತ ಕೋಟಿ ವೃಕ್ಷ ಅಂದೋಲನವನ್ನು ಆಯೋ ಜಿಸಲಾಗುತ್ತಿದ್ದು, ಇದರಂಗವಾಗಿ ಒಂದು ಕೋಟಿ ಗಿಡಗಳನ್ನು ಅರಣ್ಯ ಇಲಾಖೆ ವತಿಯಿಂದ ನೆಡಲಾಗುವುದು. ಮಂಗಳೂರು ವಿಭಾಗದಲ್ಲಿ 2 ಲಕ್ಷ ಗಿಡಗಳನ್ನು ನೆಡುವ ಯೋಜನೆ ಇದೆ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ಶ್ರೀಧರ್ ತಿಳಿಸಿದರು.







