ಈ ವರ್ಷ ಅರ್ಕಿಟಿಕ್ ಹಿಮಮುಕ್ತ....!

ಲಂಡನ್,ಜೂ.5: ಭೂಮಿಯ ಉತ್ತರಧ್ರುವದಲ್ಲಿರುವ ಆರ್ಕಿಟಿಕ್ ಸಾಗರವು ಬರೋಬ್ಬರಿ 1 ಲಕ್ಷ ವರ್ಷಗಳ ಆನಂತರ ಅಂದರೆ ಈ ವರ್ಷ ಅಥವಾ ಮುಂದಿನ ವರ್ಷದಲ್ಲಿ ಹಿಮಮುಕ್ತವಾಗುವ ಸಾಧ್ಯತೆಯಿದೆಯೆಂದು ಕೇಂಬ್ರಿಡ್ಜ್ ವಿವಿಯ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಈ ವರ್ಷದ ಸೆಪ್ಟಂಬರ್‌ನಲ್ಲಿ ಆರ್ಕಿಟಿಕ್ ಸಮುದ್ರದ 10 ಲಕ್ಷ ಚದರ ಕಿ.ಮೀ. ಪ್ರದೇಶವು ಹಿಮದಿಂದ ಮುಕ್ತವಾಗಲಿದೆಯೆಂದು ಅವರು ಹೇಳಿದ್ದಾರೆ.
ಈ ವರ್ಷದ ಜೂನ್ 1ರಂದು ಆರ್ಕಿಟಿಕ್‌ನ 11.1 ದಶಲಕ್ಷ ಚ.ಕಿ.ಮೀ.ಗೂ ಕಡಿಮೆ ಪ್ರದೇಶದಲ್ಲಿ ಸಮುದ್ರಹಿಮ ಇದ್ದುದನ್ನು ಅಮೆರಿಕದ ರಾಷ್ಟ್ರೀಯ ಹಿಮ ಹಾಗೂ ಮಂಜುಗಡ್ಡೆ ದತ್ತಾಂಶ ಕೇಂದ್ರವು ದಾಖಲಿಸಿತ್ತು. ಕಳೆದ 30 ವರ್ಷಗಳಲ್ಲಿ ಆರ್ಕಿಟಿಕ್ ಸಾಗರದ 12.7 ದಶಲಕ್ಷ ಚ.ಕಿ.ಮೀ. ಪ್ರದೇಶವು ಹಿಮಾವೃತವಾಗಿತ್ತು.
ಆರ್ಕಿಟಿಕ್ ಹಿಮವು, ಈ ವರ್ಷದ ಸೆಪ್ಟಂಬರ್‌ನಲ್ಲಿ ಹತ್ತು ದಶಲಕ್ಷ ಚ.ಕಿ.ಮೀ.ಗೂ ಕಡಿಮೆ ಪ್ರದೇಶದಲ್ಲಿ ಮರೆಯಾಗಲಿದೆಯೆಂದು ಕೇಂಬ್ರಿಜ್ ವಿವಿಯ, ಧ್ರುವ ಪ್ರದೇಶದ ಸಾಗರ ಭೌತಶಾಸ್ತ್ರ ಅಧ್ಯಯನ ಗುಂಪಿನ ವರಿಷ್ಠ ವಾಡ್‌ಹ್ಯಾಮ್ಸ್ ತಿಳಿಸಿದ್ದಾರೆ
ಒಂದು ವೇಳೆ ಮಂಜುಗಡ್ಡೆಯು ಸಂಪೂರ್ಣವಾಗಿ ಕಣ್ಮರೆಯಾಗದಿದ್ದರೂ, ಈ ವರ್ಷ ಅದು ದಾಖಲೆ ಮಟ್ಟದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದು ಖಚಿತ ಎಂದವರು ಹೇಳಿದರು.ಆರ್ಕಿಟಿಕ್ ಸಮುದ್ರದ 3.4 ದಶಲಕ್ಷ ಕಿ.ಮೀ.ಗಿಂತಲೂ ಕಡಿಮೆ ವ್ಯಾಪ್ತಿಯಲ್ಲಿ ಹಿಮವಿರುವುದು ಎಂದವರು ತಿಳಿಸಿದರು.
ಈ ಮೊದಲು ಸುಮಾರು 1 ಲಕ್ಷ ವರ್ಷಗಳ ಹಿಂದೆ ಆರ್ಕಿಟಿಕ್ ಸಾಗರವು ಸಂಪೂರ್ಣವಾಗಿ ಹಿಮಮುಕ್ತವಾಗಿತ್ತೆಂದು ನಂಬಲಾಗಿದೆ. ಆರ್ಕಿಟಿಕ್ ಸಾಗರದಲ್ಲಿ ಹಿಮವು ಈ ಸೆಪ್ಟಂಬರ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದು ಹಾಗೂ ಡಿಸೆಂಬರ್ ಬಳಿಕ ಚಳಿಗಾಲ ಆಗಮನವಾಗುತ್ತಿದ್ದಂತೆ ಮತ್ತೆ ಸಮುದ್ರ ಮಂಜಿನಿಂದ ಹೆಪ್ಪುಗಟ್ಟತೊಡಗುತ್ತದೆ.







