ಜೂ.10: ಮುಹಮ್ಮದ್ ಅಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ

ಲೂಸಿವಿಲ್ಲೆ,ಜೂ.5: ಶುಕ್ರವಾರ ನಿಧನರಾದ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಜೂನ್ 10ರಂದು ಅವರ ಹುಟ್ಟೂರಾದ ಅಮೆರಿಕದ ಲೂಸಿವಿಲೆಯಲ್ಲಿ ನಡೆಯಲಿದೆಯೆಂದು ಅವರ ಕುಟುಂದ ವಕ್ತಾರರೊಬ್ಬರು ತಿಳಿಸಿದ್ದಾರೆ. ಮುಹಮ್ಮದ್ ಅಲಿ ಅವರ ಅಂತ್ಯಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅವರು ವಿಶ್ವದ ಜನತೆಗೆ ಆಹ್ವಾನ ನೀಡಿದ್ದಾರೆ.
ರವಿವಾರದಂದು, ಅಲಿ ಅವರ ಪಾರ್ಥಿವಶರೀರವನ್ನು ಅರಿರೆನಾದ ಸ್ಕಾಟ್ಸ್‌ಡೇಲ್‌ನಿಂದ, ಕೆಂಟಕಿ ಪ್ರಾಂತದ ಲೂಯಿಸ್‌ವಿಲೆ ನಗರದಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಅಲಿ ಕುಟುಂಬದ ಸದಸ್ಯರು,ಬಂಧುಗಳು ಉಪಸ್ಥಿತರಿದ್ದರು. ಜೂನ್ 9ರಂದು ಗುರುವಾರ ಕುಟುಂಬದ ವತಿಯಿಂದ ಖಾಸಗಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರದಂದು ನಗರದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆಯನ್ನು ನಡೆಸಲಾಗುವುದು. ಬಳಿಕ ಇಸ್ಲಾಮಿ ಧಾರ್ಮಿಕ ವಿಧಿ ಪ್ರಕಾರ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಕುಟುಂಬದ ವಕ್ತಾರ ಬಾಂಬ ಗುನ್ನೆಲ್ ತಿಳಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸೇರಿದಂತೆ ಜಗತ್ತಿನ ಹಲವಾರು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಹಮ್ಮದ್ ಅಲಿ ಅವರ ಗೌರವಾರ್ಥವಾಗಿ ಲೂಸಿವಿಲೆ ನಗರದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಸಹಸ್ರಾರು ಬಾಕ್ಸಿಂಗ್ ಅಭಿಮಾನಿಗಳು ಅಲಿ ಬಾಲ್ಯದ ದಿನಗಳನ್ನು ಕಳೆದಿದ್ದ ಮನೆಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಮನೆಯನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ‘‘ನಮ್ಮ ಹೃದಯಗಳಿಗೆ ವಸ್ತುಶಃ ಘಾಸಿಯಾಗಿದೆ. ಆದರೆ ಅತ ನೋವಿನಿಂದ ಮುಕ್ತರಾಗಿದ್ದಾರೆಂದು ನಮಗೆ ಸಂತಸವಾಗಿದೆ’’ಎಂದು ಅಲಿಯವರ ಪುತ್ರಿ ಹಾನಿ ಅಲಿ ಟ್ವೀಟಿಸಿದ್ದಾರೆ.





