ಭಾರತ- ಬಾಂಗ್ಲಾ ಗಡಿಭಾಗದ ಮದ್ರಸಗಳಿಂದ ಭಯೋತ್ಪಾದನೆ
ವಿವಾದಿತ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷನ ಮತ್ತೊಂದು ಹೇಳಿಕೆ

ಕೊಲ್ಕತ್ತಾ: ವಿವಾದಿತ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತೊಂದು ಕೋಮು ಪ್ರಚೋದಕ ಹೇಳಿಕೆ ನೀಡಿದ್ದು, ಭಾರತ- ಬಾಂಗ್ಲಾದೇಶ ಗಡಿಪ್ರದೇಶದ ಮದ್ರಸಾಗಳಿಗೆ ವಿದೇಶಿ ಸಂಘ ಸಂಸ್ಥೆಗಳು ನೆರವು ನೀಡುತ್ತಿದ್ದು, ಇವು ಭಯೋತ್ಪಾದನೆ ಸೃಷ್ಟಿಕೇಂದ್ರಗಳು ಎಂದು ಆಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣ ಗಡಿಭಾಗವನ್ನು ಮುಚ್ಚಬೇಕು. ಈ ಮದ್ರಸಗಳು ಭಯೋತ್ಫಾದನೆಯ ಸೃಷ್ಟಿಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದು, ರಾಷ್ಟ್ರದ್ರೋಹಿ ಚಟುವಟಿಕೆಗಳ ಹಾಗೂ ಅಕ್ರಮ ಜಾನುವಾರು ಸಾಗಾಟ ಚಟುವಟಿಕೆಗಳ ಕೇಂದ್ರಗಳಾಗಿ ಬೆಳೆದಿವೆ ಎಂದು ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.
ಉಭಯ ದೇಶಗಳ ನಡುವಿನ ಗಡಿಪ್ರದೇಶವಾದ ಪೋರಸ್ ಗಡಿ ಪ್ರದೇಶ ದೇಶದ ಭದ್ರತೆಗೆ ದೊಡ್ಡ ಅಪಾಯ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಳ್ಳುವ ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಅಕ್ರಮ ನುಸುಳುವಿಕೆ ನಿಂತಿದೆ. ಆದರೆ ಭಾರತ- ಬಾಂಗ್ಲಾ ಗಡಿಭಾಗದಲ್ಲಿ ನುಸುಳುವಿಕೆ ಮುಂದುವರಿದಿದೆ. ಈ ಭಾಗದಲ್ಲಿ ನಡೆದ ಬಾಂಬ್‌ದಾಳಿಯ ಬಗ್ಗೆ ತನಿಖೆ ಈ ಅಂಶವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ. ರಾಷ್ಟ್ರವಿರೋಧಿ ಹಾಗೂ ಸಮಾಜವಿರೋಧಿ ಶಕ್ತಿಗಳು ದೇಶದೊಳಕ್ಕೆ ನುಸುಳಲು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.