'ಉಡ್ತಾ ಪಂಜಾಬ್ ' ಗೆ ಅಕಾಲಿದಳದಿಂದ ಕಿರಿಕ್ ?
ಹೆಸರಲ್ಲಿ 'ಪಂಜಾಬ್ ' ಇರಬಾರದೆಂದ ಸಮಿತಿ !
ಹೊಸದಿಲ್ಲಿ, ಜೂ. 6 : ಬಾಲಿವುಡ್ ಹೊಸ ಚಿತ್ರ ಉಡ್ತಾ ಪಂಜಾಬ್ ಸಮಸ್ಯೆಗೆ ಸಿಲುಕಿದೆ. ಚಿತ್ರವನ್ನು ನೋಡಲು ರಚಿಸಲಾದ ಸಮಿತಿಯೊಂದು ಚಿತ್ರದ ಹೆಸರಿನಿಂದ ' ಪಂಜಾಬ್ ರಾಜ್ಯ ' ದ ಹೆಸರು ಹಾಗು ಚಿತ್ರದಲ್ಲಿ ರಾಜಕೀಯ ಹಾಗು ಚುನಾವಣೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ತೆಗೆದು ಹಾಕಬೇಕೆಂದು ಹೇಳಿದೆ.
ಸಮಿತಿಯ ಆದೇಶ ಪಾಲಿಸಿದರೆ ಚಿತ್ರದ ಹೆಸರೇ ಬದಲಾಗುವ ಜೊತೆಗೆ ಅದರ ಇಡೀ ಚಿತ್ರಕತೆಯ ಸ್ವರೂಪವೇ ಬದಲಾಗುವ ಸಾಧ್ಯತೆ ಇದ್ದು ಈಗ ಚಿತ್ರ ಅಡಕತ್ತರಿಯಲ್ಲಿ ಸಿಲುಕಿದೆ. ಕೇಂದ್ರೀಯ ಸೆನ್ಸಾರ್ ಮಂಡಳಿ ಕಳೆದ ತಿಂಗಳು ಚಿತ್ರದಲ್ಲಿ ಇರುವ ಒಂದು ಹಾಡು, ದೌರ್ಜನ್ಯದ ದೃಶ್ಯಗಳು, ಬೈಗುಳ ಸಹಿತ ಒಟ್ಟು 40 ದೃಶ್ಯಗಳನ್ನು ತೆಗೆದು ಹಾಕಲು ಹೇಳಿತ್ತು. ಇಲ್ಲದಿದ್ದರೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಚಿತ್ರದಲ್ಲಿ ಪಂಜಾಬ್ ನ ಮಾದಕ ದ್ರವ್ಯ ಸಮಸ್ಯೆಯನ್ನು ವೈಭವೀಕರಿಸಲಾಗಿದೆ ಎಂದು ಆಡಳಿತ ಪಕ್ಷ ಶಿರೋಮಣಿ ಅಕಾಲಿ ದಳ ದೂರಿತ್ತು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಇದೇ ಕಾರಣಕ್ಕೆ ಬಿಜೆಪಿಯ ಮೈತ್ರಿ ಪಕ್ಷ ಅಕಾಲಿದಳ ರಾಜಕೀಯ ಒತ್ತಡ ಹೇರಿ ಚಿತ್ರಕ್ಕೆ ಸಮಸ್ಯೆ ಒಡ್ಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.