ಸಂವಿಧಾನ ಬರೆದದ್ದು ಅಂಬೇಡ್ಕರ್ ಅಲ್ಲ ಎಂದ ಎಬಿವಿಪಿ ಮಾಜಿ ಪ್ರಧಾನ ಕಾರ್ಯದರ್ಶಿ!

ಹೊಸದಿಲ್ಲಿ, ಜೂ.7: ಮಾಜಿ ಪತ್ರಕರ್ತ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಮಾಜಿ ಪ್ರಧಾನ ಕಾರ್ಯದರ್ಶಿ ರಾಮ್ ಬಹದ್ದೂರ್ ರಾಯ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನರೇಂದ್ರ ಮೋದಿ ಸರಕಾರ ಇವರನ್ನು ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಆಫ್ ಆರ್ಟ್ಸ್ನ ಅಧ್ಯಕ್ಷರಾಗಿ ಇವರನ್ನು ನೇಮಕ ಮಾಡಿದ್ದೇ ವಿವಾದಕ್ಕೆ ಎಣೆಯಾಗಿತ್ತು. ಇದೀಗ ದೇಶದ ಸಂವಿಧಾನದ ಕರಡು ಸಿದ್ಧಪಡಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದರು ಎನ್ನುವುದು ಕೇವಲ ಭ್ರಮೆ ಎಂದು ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಸರಕಾರ ದೇಶದ ಸಾಂಸ್ಕೃತಿಕ ಸಂಘಟನೆಯನ್ನು ಕೇಸರೀಕರಿಸಲು ಹೊರಟಿದೆ ಎಂದು ಇವರ ನೇಮಕದ ವಿರುದ್ಧ ಆರೆಸ್ಸೆಸ್ ಹಾಗೂ ಬಿಜೆಪಿ ವಿರೋಧಿ ಶಕ್ತಿಗಳು ಧ್ವನಿ ಎತ್ತಿದ್ದವು. ಇದೀಗ ಔಟ್ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಾಯ್, ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಸಂವಿಧಾನದ ಕರಡು ಸಿದ್ಧಪಡಿಸುವಲ್ಲಿ ಅಂಬೇಡ್ಕರ್ ಪಾತ್ರ ಸೀಮಿತ. ಬಿ.ಎನ್.ರಾವ್ ನೀಡಿದ ಎಲ್ಲ ಮಾಹಿತಿಯ ಭಾಷೆಯನ್ನು ಶುದ್ಧಪಡಿಸುವ ಕೆಲಸವನ್ನು ಅಂಬೇಡ್ಕರ್ ಮಾಡಿದರು. ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಅಥವಾ ವಿಚಕ್ಷಣಾ ದಳದಲ್ಲಿ ತಳಹಂತದ ಯೋಧರು ಹರುಕು ಮುರುಕು ಇಂಗ್ಲಿಷ್ನಲ್ಲಿ ವರದಿ ಬರೆಯುತ್ತಾರೆ. ಐಪಿಎಸ್ ಅಧಿಕಾರಿಗಳು ಅದನ್ನು ಒಳ್ಳೆಯ ಇಂಗ್ಲಿಷ್ಗೆ ರೂಪಾಂತರಿಸಿ ಪ್ರಧಾನಿಗೆ ನೀಡುತ್ತಾರೆ. ಸಂವಿಧಾನ ಕರಡು ವಿಚಾರದಲ್ಲೂ ಹಾಗೆಯೇ ಆಗಿದೆ ಎಂದು ರಾಯ್ ಪ್ರತಿಪಾದಿಸಿದ್ದಾರೆ.
ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂದು ಹೇಳಿರುವ ಅವರು, ಒಂದು ವೇಳೆ ಮುಂದೊಂದು ದಿನ ಸಂವಿಧಾನಕ್ಕೆ ಬೆಂಕಿ ಹಚ್ಚುವುದಾದರೆ, ಹಾಗೆ ಮಾಡುವ ಮೊದಲ ವ್ಯಕ್ತಿ ನಾನು ಎಂದು ಆಂಧ್ರಪ್ರದೇಶ ರಚನೆ ಕುರಿತ ಮಸೂದೆಯ ಚರ್ಚೆ ವೇಳೆ ಅವರು ರಾಜ್ಯಸಭೆಯಲ್ಲಿ ಹೇಳಿದ್ದರು.