ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಸಿಎಂ ಗರಂ

ಬೆಂಗಳೂರು, ಜೂ.7: ಸರಕಾರಿ ಕಚೇರಿಗಳು, ಆಸ್ಪತ್ರೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಕರ್ತವ್ಯ ಲೋಪವೆಸಗುವ ಅಧಿಕಾರಿಗಳು ಕಂಡು ಬಂದರೆ ಮುಲಾಜಿಲ್ಲದೆ ಅಮಾನತ್ತು ಮಾಡುವ ಮೂಲಕ ಬಿಸಿ ಮುಟ್ಟಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುಮಾರು ಐದು ಗಂಟೆಗಳ ಕಾಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಜಿಲ್ಲೆಗಳಿಗೆ ಭೇಟಿ ನೀಡಿದ ಕುರಿತು ಸರಕಾರಕ್ಕೆ ವರದಿ ನೀಡುವಂತೆ ಕಟ್ಟಪ್ಪಣೆ ಮಾಡಿದರು.
ಸರಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಜಿಲ್ಲೆಗಳಿಗೆ ಭೇಟಿ ನೀಡದ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಮುತುವರ್ಜಿ ವಹಿಸದ ಅಧಿಕಾರಿಗಳಿಗೆ ಚಾಟಿ ಬೀಸಿದರು. ತಮಗೆ ವಹಿಸಿರುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮರ್ಪಕವಾಗಿ ನಿಭಾಯಿಸದಿದ್ದರೆ ಗಂಭೀರವಾಗಿ ಪರಿಗಣಿಸುವುದರ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅನಿರೀಕ್ಷಿತ ಭೇಟಿ: ಸರಕಾರದ ಕಾರ್ಯಕ್ರಮಗಳು ಜನರಿಗೆ ಅದರಲ್ಲೂ ಬಡವರಿಗೆ ತಲುಪಬೇಕಾದರೆ ಅಧಿಕಾರಿಗಳ ಪಾತ್ರ ಬಹು ಮುಖ್ಯ. ಸರಕಾರದ ಯೋಜನೆಗಳು ಸಫಲವಾಗಬೇಕಾದರೆ ಮಧ್ಯವರ್ತಿಗಳ ಹಾವಳಿಗೆ ಮೊದಲು ಕಡಿವಾಣ ಹಾಕಬೇಕು. ಆ ಕೆಲಸವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಗಳಿಗೆ ಭೇಟಿ ನೀಡಿದಾಗ ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಆಸ್ಪತ್ರೆ, ಕೃಷಿ ಇಲಾಖೆ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮಧ್ಯವರ್ತಿಗ ಹಾವಳಿ ಯನ್ನು ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇರುವ ತೊಂದರೆಗಳನ್ನು ನಿವಾರಿಸಿ ಕೆಲಸ ಮಾಡದ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಮುಖ್ಯಮಂತ್ರಿ ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನೀವು ಈ ಮೊದಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಲ್ಲಿ ಕೆಲಸ ಮಾಡಿದ್ದೀರಿ. ಆ ಅನುಭವವನ್ನು ಈಗ ಬಳಸಿಕೊಳ್ಳಿ, ಇದರಿಂದ ಆಡಳಿತವನ್ನು ಚುರುಕುಗೊಳಿಸಲು ಮತ್ತು ಪಾರದರ್ಶಕತೆ ತರಲು ಸಹಾಯವಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸರಕಾರ ನಿಮ್ಮಿಂದ ನಿರೀಕ್ಷೆ ಮಾಡುವುದೇನು ಎಂಬುದು ನಿಮಗೆ ತಿಳಿದಿದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಆಡಳಿತದಲ್ಲಿ ಚುರುಕುತನ ಮೂಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಜಿಲ್ಲೆಗಳಿಗೆ ಭೇಟಿ ನೀಡಿ ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಿ. ಅದನ್ನು ನಿಮ್ಮ ದಿನಚರಿಯಲ್ಲೂ ದಾಖಲು ಮಾಡಿ ಎಂದು ತಿಳಿಸಿದರು.
ಮಾವನ ಮನೆಗೆ ಬಂದಿದ್ದೀರಾ?: ಸಭೆ ಪ್ರಾರಂಭವಾಗುತ್ತಿದ್ದಂತೆ ಅಂಕಿ- ಅಂಶಗಳನ್ನು ಒದಗಿಸಲು ತಡಕಾಡಿದ ಕೆಲವು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಕಂಡ ಮುಖ್ಯಮಂತ್ರಿ, ಮಾವನ ಮನೆಗೆ ಬಂದಿದ್ದೀರಾ? ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಅಂಕಿ-ಅಂಶಗಳ ಸಹಿತ ಬಾರದೆ ಕೈಬೀಸಿಕೊಂಡು ಬಂದರೆ ಹೇಗೆ? ತಮ್ಮಲ್ಲಿ ಬದ್ಧತೆ ಹಾಗೂ ಸಿದ್ಧತೆ ಇರಬೇಡವೆ? ಎಂದು ಗುಡುಗಿದರು.
ಒಂದು ಹಂತದಲ್ಲಿ ಮಾಹಿತಿ ಇಲ್ಲದ ಅಧಿಕಾರಗಳ ಕಂಡು ಹಾಗಾದರೆ ಸಭೆಯನ್ನು ಮುಂದೂಡೋಣ. ಸಮರ್ಪಕ ಮಾಹಿತಿ ಕಲೆ ಹಾಕಿಕೊಂಡು ಬನ್ನಿ ಎಂದು ತಮ್ಮ ಸಿಟ್ಟನ್ನು ಹೊರಹಾಕಿದರು. ಪೋಡಿ ಮಾಡಿ ಕೊಡಿ ಎಂದು ಅರ್ಜಿ ಸಲ್ಲಿಸಿದರೆ ಭೂ ಮಾಪಕರು ಅರ್ಜಿದಾರರನ್ನು ಅಲೆದಾಡಿಸುತ್ತಾರೆ. ಲಂಚ ಕೊಟ್ಟವರ ಅರ್ಜಿಯನ್ನು ಬೇಗ ವಿಲೇವಾರಿ ಮಾಡುತ್ತಾರೆ. ಹೀಗಾದರೆ, ಬಡ ರೈತರ ಪಾಡೇನು? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಹಣಕ್ಕಾಗಿ ಒತ್ತಾಯ ಮಾಡುವ ಭೂ ಮಾಪಕರು ರಕ್ತ ಹೀರುವ ತಿಗಣೆಗಳಂತೆ. ವಿನಾಕಾರಣ ಅರ್ಜಿದಾರರಿಗೆ ತೊಂದರೆ ನೀಡುವ ಭೂ ಮಾಪಕರನ್ನು ಅಮಾನತು ಮಾಡಿ ಎಂದು ಕಟ್ಟಪ್ಪಣೆ ಮಾಡಿದರು.







