ಸರಕಾರಿ ಸೀಟುಗಳನ್ನು ಪಡೆದೇ ತೀರುತ್ತೇವೆ: ಜಯಚಂದ್ರ
ಶೇ.40ರಷ್ಟು ದಂತ, ವೈದ್ಯಕೀಯ ಸೀಟು

ಬೆಂಗಳೂರು, ಜೂ.7: ಖಾಸಗಿ ದಂತ ಹಾಗೂ ವೈದ್ಯಕೀಯ ಕಾಲೇಜಿನಿಂದ ಸರಕಾರಕ್ಕೆ ಬಿಟ್ಟುಕೊಡಬೇಕಾದ ಶೇ.40 ಸೀಟುಗಳನ್ನು ಪಡೆದುಕೊಂಡೇ ತೀರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಖಾಸಗಿ ಕಾಲೇಜುಗಳು ಶೇ.40ರಷ್ಟು ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಡುವುದರ ಕುರಿತು ಸರಕಾರಕ್ಕೆ ಯಾವುದೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲ್ಲು ಪಕ್ಷೇತರ ಶಾಸಕರು ಬೆಂಬಲ ನೀಡುತ್ತಾರೆ. ಇದರ ಹೊರತಾಗಿ ಯಾರನ್ನೂ ರೆಸಾರ್ಟ್‌ಗೆ ಕರೆದುಕೊಂಡು ಹೋಗಿಲ್ಲ. ಪಕ್ಷೇತರ ಶಾಸಕರು ಸ್ವಂತ ಕೆಲಸದ ಮೇಲೆ ಮುಂಬೈಗೆ ತೆರಳಿದ್ದಾರೆ. ಇದಕ್ಕೂ ಕಾಂಗ್ರೆಸ್‌ಗೂ ಯಾವುದೆ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಸಭೆಯ ನಮ್ಮ 3ನೆ ಅಭ್ಯರ್ಥಿ ಗೆಲ್ಲಲ್ಲು 12 ಮತಗಳು ಬೇಕಿದೆ. ಪಕ್ಷೇತರ ಸದಸ್ಯರು ಸಾಮಾನ್ಯವಾಗಿ ಆಡಳಿತರೂಢ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರು ವಿಭಜನೆ: ಬೆಂಗಳೂರು ವಿವಿಯನ್ನು ಈಗಾಗಲೆ ವಿಭಜಿಸಲಾಗಿದೆ. ಮೂರು ವಿಭಾಗಗಳಾಗಿದ್ದು, ಉತ್ತರ ವಿಭಾಗಕ್ಕೆ ಮಂಗಳೂರು ವಿವಿ ಕುಲಸಚಿವ ಕೆಂಪರಾಜುರನ್ನು, ಕೇಂದ್ರ ವಿಭಾಗಕ್ಕೆ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರೊಫೆಸರ್ ಜಾಫೆಟ್‌ರನ್ನು ಕೋಶಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.
ಶ್ಯಾಂಭಟ್ ನೇಮಕಾತಿಗೆ ಅಡ್ಡಗಾಲು ಶ್ಯಾಂಭಟ್‌ರನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಿಸಲು ರಾಜ್ಯ ಸರಕಾರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರಾಜ್ಯಪಾಲರು ಕೆಲ ಸ್ಪಷ್ಟನೆಗಳನ್ನು ಕೇಳಿದ್ದಾರೆ. ಈ ಮೂಲಕ ರಾಜ್ಯ ಸರಕಾರದ ಮತ್ತೊಂದು ನೇಮಕಾತಿಗೂ ರಾಜ್ಯಪಾಲರು ಅಡ್ಡಗಾಲು ಹಾಕಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







