ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಜನಾರ್ದನ ಪೂಜಾರಿಯೇ ಸಾಕು: ವಸಂತ ಆಚಾರಿ
ಉಳ್ಳಾಲ, ಜೂ.7: ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿಯವರು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದೇಶದಾದ್ಯಂತ ಬಿಜೆಪಿಯು ಕಾಂಗ್ರೆಸ್ ಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಂಡಿದ್ದರೆ, ಕರ್ನಾಟಕವನ್ನು ಮಾತ್ರ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು ಜನಾರ್ದನ ಪೂಜಾರಿಯಂತಹ ನಾಚಿಕೆಗೆಟ್ಟ ಹಿರಿಯ ಕಾಂಗ್ರೆಸ್ ಮುಖಂಡರಿಂದಲೇ ಸಾಧ್ಯ ಎಂದು ಸಿಐಟಿಯುನ ರಾಜ್ಯ ಸಮಿತಿ ಮುಖಂಡ ವಸಂತ ಆಚಾರಿ ಲೇವಡಿ ಮಾಡಿದರು.
ಅವರು ತೊಕ್ಕೊಟ್ಟಿನಲ್ಲಿ ಮಂಗಳವಾರ ನಡೆದ ಸಿಐಟಿಯುನ 15 ನೆ ದ.ಕ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಪಕ್ಷಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿರುವ ನಾಚಿಕೆಗೆಟ್ಟ ಹಿರಿಯ ರಾಜಕಾರಣಿ ಪೂಜಾರಿಯವರು ಎಂದಿಗೂ ಸಂಸದ ನಳಿನ್‌ಕುಮಾರ್ ಕಟೀಲ್‌ರ ಕಾರ್ಯವೈಖರಿಯ ಬಗ್ಗೆ ವಿರೋಧ ಮಾತಾಡದೇ ಕೀಳು ಮಟ್ಟದ ರಾಜಕಾರಣ ನಡೆಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ನಮ್ಮ ದೇಶದ ಪ್ರಧಾನಿಯವರು ಆ ರಾಷ್ಟ್ರ ಈ ರಾಷ್ಟ್ರವೆಂದೇ ಸುತ್ತಾಡುತ್ತಿದ್ದು, ವಿದೇಶಾಂಗ ಸಚಿವ ಸ್ಥಾನದ ಬೆಲೆ ಕಳಕೊಳ್ಳುವಂತೆ ಮಾಡಿದ್ದು,ಇಂತಹ ಹಲ್ಲಿಲ್ಲದ ವಿದೇಶಾಂಗ ಸಚಿವ ಸ್ಥಾನವನ್ನು ರದ್ದುಗೊಳಿಸುವುದೇ ವಾಸಿ ಎಂದು ಹೇಳಿದರು.
ಮುಖ್ಯ ಭಾಷಣಗೈದ ಸಿಐಟಿಯು ಕರ್ನಾಟಕ ಸಮಿತಿ ಅಧ್ಯಕ್ಷ ಕಾಂ.ವಿ.ಜೆ.ಕೆ ನಾಯರ್ ಮಾತನಾಡಿ, ದೇಶದಲ್ಲಿ ಕಾರ್ಮಿಕ ವಿರೋಧಿ ನೀತಿ ಮೇಳೈಸುತ್ತಿದ್ದು ಕರ್ನಾಟಕವೂ ಅದಕ್ಕೆ ಹೊರತು ಪಡಿಸಿಲ್ಲ. ಸಿಐಟಿಯು ಕಳೆದ 70 ವರುಷಗಳಿಂದಲೂ ಕನಿಷ್ಠವೇತನ ಜಾರಿಗೊಳಿಸಲು ಸತತ ಹೋರಾಟ ನಡೆಸುತ್ತಿದ್ದು ಸರಕಾರಗಳು ಜಾಣಕುರುಡು ಪ್ರದರ್ಶಿಸುತ್ತಾ ಬಂದಿವೆ . ಕರ್ನಾಟಕ ರಾಜ್ಯದಲ್ಲಂತೂ ರೌಡಿ ಶಾಸಕರ ಸಾಮ್ರಾಜ್ಯವೇ ಮೇಳೈಸುತ್ತಿದ್ದು ತಮ್ಮ ಕೆಲಸಗಳಿಗೆ ಸೊಪ್ಪು ಹಾಕದ ಅನುಪಮಾ ಶೆಣೈರಂತಹ ದಕ್ಷ ಅಧಿಕಾರಿಗಳನ್ನೇ ದಮನಿಸಲು ಮುಂದಾಗಿದ್ದರೂ ,ವಿರೋಧ ಪಕ್ಷಗಳು ಹಲ್ಲಿಲ್ಲದ ನಾಗರಹಾವುಗಳಂತೆ ವರ್ತಿಸುತ್ತಿವೆ ಎಂದು ಟೀಕಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಜಿಲ್ಲಾ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮಂಡಿಸಿದರು.
ಸಿಐಟಿಯು ಉಳ್ಳಾಲ ಸಮಿತಿ ಅಧ್ಯಕ್ಷ ಕಾಂ.ಕೃಷ್ಣಪ್ಪ ಸಾಲ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಜಯಂತ ನಾಯ್ಕಿ, ಯೋಗೀಶ್ ಜಪ್ಪಿನಮೊಗರು, ಬಿ.ಎಂ. ಭಟ್, ಪದ್ಮಾವತಿ ಎಸ್ ಶೆಟ್ಟಿ, ಯು.ಬಿ.ಲೋಕಯ್ಯ, ರಾಮಣ್ಣ ವಿಟ್ಲ, ಜಯಂತಿ ಶೆಟ್ಟಿ ವೇದಿಕೆಯಲ್ಲಿ ಇದ್ದರು.
ಸಮ್ಮೇಳನಕ್ಕೂ ಮುನ್ನ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಿಂದ ಒಳಪೇಟೆಯ ಸಮ್ಮೇಳನ ವೇದಿಕೆಯವರೆಗೆ ಬೃಹತ್ ಮೆರವಣಿಗೆ ನಡೆಯಿತು.





.jpg.jpg)



