ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಗುರುವಾಯನಕೆರೆ ಬಳಿಯ ತಿರುವು

ಬೆಳ್ತಂಗಡಿ, ಜೂ.7: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದರೂ ಸಂಬಂಧಿಸಿದ ಇಲಾಖೆಯವರು ಮುಂಜಾಗೃತಾ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದಕ್ಕೆ ಸಾಕ್ಷಿಯಂತಿದೆ ತಾಲೂಕಿನ ಗುರುವಾಯನಕೆರೆಯ ಕೆರೆಯ ಸಮೀಪದ ಅಪಾಯಕಾರಿ ತಿರುವಿನ ಬಳಿಯ ತಗ್ಗು ಪ್ರದೇಶ.
ತಿಂಗಳ ಹಿಂದೆ ಕೆರೆಯ ಬಳಿ ಗದ್ದೆಗೆ ಹೋಗುವ ದಾರಿಯಲ್ಲಿರುವ ಲೋಹದ ರಕ್ಷಣಾ ತಡೆ ಪಟ್ಟಿಗೆ ರಾತ್ರಿ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಅದು ಕಳಚಿ ಬಿದ್ದಿದೆ. ಹೀಗಾಗಿ ಅಪಘಾತಕ್ಕೆ ಆಹ್ವಾನ ನೀಡಿದಂತಿದೆ.
ಕಾರ್ಕಳ ಹಾಗೂ ಮೂಡುಬಿದಿರೆ ಮಾರ್ಗದಿಂದ ಗುರುವಾಯನಕೆರೆಗೆ ಸಂಚರಿಸುವಾಗ ಚಾಲಕರು ತಿರುವಿನ ಬಳಿ ಜಾಗೃತೆಯಿಂದ ವಾಹನಗಳನ್ನು ಚಲಾಯಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ರಾತ್ರಿಯ ವೇಳೆ ಸಂಚರಿಸುವ ವಾಹನಗಳಿಗೆ ಅಪಾಯಕಾರಿ ಸ್ಥಿತಿ ಸೃಷ್ಠಿಯಾಗಿದೆ. ಕಾರಣ ತಿರುವಿನ ಬಳಿವಿರುವ ದಾರಿದೀಪ ಕಳೆದ ಇಪ್ಪತ್ತು ದಿನಗಳಿಂದ ಉರಿಯುತ್ತಿಲ್ಲ. ಸದಾ ಕಗ್ಗತ್ತಲು ಇರುವುದರಿಂದ ಪರವೂರಿನ ವಾಹನ ಚಾಲಕರಿಗೆ ಅಪಾಯದ ಬಗ್ಗೆ ತಿಳಿಯುವುದಿಲ್ಲ.
ಈ ಹಿಂದೆ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಸ್ಥಳೀಯರು ಹಗಲು, ರಾತ್ರಿಯನ್ನದೇ ಗಾಯಾಳುಗಳಿಗೆ ಮಾನವೀಯತೆಯ ನೆಲೆಯಿಂದ ಸಹಕರಿಸಿದ್ದಾರೆ. ಇದೇ ಮಾರ್ಗವಾಗಿ ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿತ್ಯ ಸಂಚರಿಸಿದರೂ ಸಮಸ್ಯೆಯನ್ನು ಗಮನಿಸಿಲ್ಲ.
ಅವಸರವೇ ಅಪಘಾತಕ್ಕೆ ಮೂಲವೆಂದು ಹೇಳಲಾದರೂ ಕಾಣದ ನಾನಾ ಕಾರಣಗಳಿರುತ್ತವೆ. ಈ ಪ್ರದೇಶದಲ್ಲಿ ಅಪಘಾತಗಳು ಸಂಭವಿಸುವ ಮೊದಲು ಸಂಬಂಧಿಸಿದ ಇಲಾಖೆಗಳು ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ತಕ್ಷಣ ಪರಿಹರಿಸುವತ್ತ ಚಿಂತಿಸಬೇಕಾಗಿದೆ.







