ಬೆಳ್ತಂಗಡಿ: ಪ್ರಥಮ ಹಂತದ ಸಾಮಾಜಿಕ ಪರಿಶೋಧನೆ

ಬೆಳ್ತಂಗಡಿ, ಜೂ.7: ವೈಯಕ್ತಿಕ ಕಾಮಗಾರಿಯ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮಾಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಿಗುವ ಅನುದಾನವು ಸಹಕಾರಿಯಾಗಲಿದೆ. ಉದ್ಯೋಗ ಖಾತರಿ ಯೋಜನೆ ಮುಖಾಂತರ ಹೆಚ್ಚು ಕೃಷಿ ಕಾರ್ಯಗಳನ್ನು ಹಾಗೂ ಸಾರ್ವಜನಿಕ ಕಾಮಗಾರಿಗಳನ್ನು ಮಾಡುವ ಮೂಲಕ ಸರಕಾರದ ಯೋಜನೆಯನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಬಂದಾರು ಗ್ರಾಮ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2016-17ನೆ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ಬಗ್ಗೆ ವಿಶೇಷ ಗ್ರಾಮಸಭೆಯ ಅಧ್ಯಕ್ಷತೆ ಹಾಗೂ ಮಾರ್ಗದರ್ಶಕ ಅಧಿಕಾರಿಯಾಗಿ ಭಾಗವಹಿಸಿದರು.
ಗ್ರಾ.ಪಂ.ಅಧ್ಯಕ್ಷ ಉದಯ ಕುಮಾರ್‌ಬಿ.ಕೆ. ಮಾತನಾಡಿ, ಉದ್ಯೋಗ ಖಾತರಿ ಯೋಜನೆಯ ಮೂಲಕ ಗ್ರಾಮದಲ್ಲಿ ಕೃಷಿ ಅಭಿವೃದ್ಧಿ, ಇಂಗುಗುಂಡಿ, ರಸ್ತೆ ಕಾಂಕ್ರಿಟೀಕರಣದ ಮೂಲಕ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಗ್ರಾಮಸ್ಥರು ಸಹಕರಿಸಬೇಕೆಂದು ವಿನಂತಿಸಿಕೊಂಡರು.
ತಾ.ಪಂ.ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಗ್ರಾ.ಪಂ.ಉಪಾಧ್ಯಕ್ಷ ಚಂದ್ರಾವತಿ ಕೆ.ವೈ., ನರೇಗ ಯೋಜನೆಯ ತಾಲೂಕು ಸಂಯೋಜಕಿ ಪವಿತ್ರ ಶೆಟ್ಟಿ, ನರೇಗ ಅಭಿಯಂತರ ಶರಣ್ ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾರದಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು. ಗ್ರಾ.ಪಂ.ಸಿಬ್ಬಂದಿ ದಿನಕರ ವಂದಿಸಿದರು.







