ಸರಕಾರದ ಮುಖ್ಯ ಕಾರ್ಯದರ್ಶಿ ಸಹಿತ ಅಧಿಕಾರಿಗಳಿಗೆ ಹೆಕೋರ್ಟ್ ನೋಟಿಸ್
ಪೊಲೀಸ್ ಮಹಾಸಭಾದ ಅಧ್ಯಕ್ಷ ಶಶಿಧರ್ ಬಂಧನ ಪ್ರಕರಣ
ಬೆಂಗಳೂರು, ಜೂ.7: ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸುವಂತೆ ಪೊಲೀಸರಿಗೆ ಕರೆ ನೀಡಿದ್ದ ಅಖಿಲ ಕರ್ನಾಟಕ ಪೊಲೀಸ್ ಮಹಾಸಭಾದ ಅಧ್ಯಕ್ಷ ಶಶಿಧರ್ ಬಂಧನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಯಲಹಂಕ ಉಪ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಮಹಾಸಭಾದ ಅಧ್ಯಕ್ಷ ಶಶಿಧರ್ ಪತ್ನಿ ಪೂರ್ಣಿಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠ, ಅರ್ಜಿ ಕುರಿತು ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು. ಅಲ್ಲದೆ, ಸಿಬಿಐ ಪೊಲೀಸ್ ಅಧೀಕ್ಷಕರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, 2013ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಪಕ್ಷ ಟಿಕೆಟ್ ಆಕ್ಷಾಂಕ್ಷಿ ಗಳಿಂದ ಅರ್ಜಿ ಆಹ್ವಾನಿಸಿ ಪಾರ್ಟಿ ಫಂಡ್‌ಗಾಗಿ ತಲಾ 10 ಸಾವಿರ ರೂ. ಸಂಗ್ರಹಿಸಿದ ಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಹೈಕೋರ್ಟ್‌ಗೆ ವಿ.ಶಶಿಧರ್ ಅರ್ಜಿ ದಾಖಲಿಸಿದ್ದರು ಎಂದು ಮಾಹಿತಿ ನೀಡಿದರು.
ಜೊತೆಗೆ ಕಳೆದ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ ನಾಮಪತ್ರದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿರುದ್ಧ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ವೀರಪ್ಪಮೊಯ್ಲಿ ವಿರುದ್ಧ ಶಶಿಧರ್ ಇದೇ ಹೈಕೋರ್ಟ್‌ನ್ನು ಪ್ರಕರಣ ಹೂಡಿದ್ದರು. ಇನ್ನು ಈತ್ತೀಚೆಗೆ ಲಾಭದಾಯಕ ಹುದ್ದೆ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧವೂ ಅರ್ಜಿ ಸಲ್ಲಿಸಿದ್ದರು ಎಂದು ಕೋರ್ಟ್‌ಗೆ ವಿವರಿಸಿದರು.
ತದನಂತರ ರಾಜ್ಯ ಪೊಲೀಸ್ ಇಲಾಖೆ ಪೇದೆಗಳ ಪರಿಸ್ಥಿತಿ ಸುಧಾರಣೆಗೆ ಆಗ್ರಹಿಸಿ ಪೊಲೀಸರ ಪ್ರತಿಭಟನೆ ಕರೆ ನೀಡಿದ್ದರು. ಇದರಿಂದ ದುರುದ್ದೇಶಪೂರಿತವಾಗಿ ಜೂನ್ 2ರಂದು ಮಧ್ಯರಾತ್ರಿ ವಿ.ಶಶಿಧರ್‌ನ್ನು ತಮ್ಮ ಮನೆಯಲ್ಲಿ 30 ಮಂದಿಯ ಪೊಲೀಸರ ತಂಡ ಬಂಧಿಸಿತ್ತು. ಬಳಿಕ ಭಾರತೀಯ ದಂಡ ಸಂಹಿತೆ, ಪೊಲೀಸ್ ಕಾಯ್ದೆ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ ಸೆಕ್ಷನ್ ಅಡಿ ದೂರು ದಾಖಲಿಸಿತ್ತು ಎಂದು ತಿಳಿಸಿದರು.
ಬಂಧನದ ದಿನ ಶಶಿಧರ್ ಮನೆಯಲ್ಲಿನ ಕಂಪ್ಯೂಟರ್ ಹಾಗೂ ಇತರೆ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಜೂನ್ 3ರಂದು ಅರ್ಜಿದಾರರು ಕಾರಾಗೃಹದಲ್ಲಿದ್ದ ತಮ್ಮ ಪತಿಯ ಭೇಟಿಗೆ ತೆರಳಿದ್ದಾಗ ಪ್ರಕರಣ ಕುರಿತು ದಾಖಲೆ ಗಳನ್ನು ಒದಗಿಸುವಂತೆ ಸೂಚಿಸಿ ಆಕೆಯ ಮನೆಯ ಬಾಗಿಲಿಗೆ ಚೀಟಿ ಅಂಟಿಸಿದ್ದರು. ಜೂನ್ 4ರಂದು ಏಕಾಏಕಿ ಮನೆಗೆ ನುಗ್ಗಿ ಅರ್ಜಿದಾರರಿಂದ ಖಾಲಿ ಕಾಗದಗಳ ಮೇಲೆ ಸಹಿ ಹಾಕಿಸಿಕೊಂಡು ಕಿರುಕುಳ ನೀಡಿದರು ಎಂದು ಆರೋಪಿಸಿದರು.
ಇದರಿಂದ ಶಶಿಧರ್ ವಿರುದ್ಧ ದಾಖಲಿಸಿರುವ ಪ್ರಕರಣ ಗಳನ್ನು ರಾಜ್ಯ ಪೊಲೀಸರು ತನಿಖೆ ನಡೆಸಿದರೆ ಅರ್ಜಿದಾ ರರಿಗೆ ನ್ಯಾಯಸಿಗುವುದಿಲ್ಲ. ಹೀಗಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ವಕೀಲ ಮೋಹನ್ ಕೋರಿದರು.





