Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದ.ಕ. ಜಿಲ್ಲೆಯ ನೀರಿನ ಸಮಸ್ಯೆ ಶಾಶ್ವತ...

ದ.ಕ. ಜಿಲ್ಲೆಯ ನೀರಿನ ಸಮಸ್ಯೆ ಶಾಶ್ವತ ನಿವಾರಣೆಯಾದೀತೇ?

ಎನ್. ಜಿ. ಮೋಹನ್, ಮಂಗಳೂರುಎನ್. ಜಿ. ಮೋಹನ್, ಮಂಗಳೂರು7 Jun 2016 11:00 PM IST
share
ದ.ಕ. ಜಿಲ್ಲೆಯ ನೀರಿನ ಸಮಸ್ಯೆ ಶಾಶ್ವತ ನಿವಾರಣೆಯಾದೀತೇ?

(ಜಿಲ್ಲಾ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಜಿಲ್ಲಾ ಮುಖ್ಯ ಆಯುಕ್ತರು, ದಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್, ದ.ಕ. ಜಿಲ್ಲೆ)

1997ನೆ ಇಸವಿಯಲ್ಲಿ ದ.ಕ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಬಿ.ಎಚ್.ಅನಿಲ್ ಕುಮಾರ್‌ರವರು ಒಮ್ಮೆ ನನ್ನೊಡನೆ ಮಾತನಾಡುತ್ತಾ, ''ಇನ್ನು ಸುಮಾರು 30 ವರ್ಷಗಳ ನಂತರ ನಿಮ್ಮ ಜಿಲ್ಲೆಯಲ್ಲಿ ತೆಂಗಿನ ಮರಗಳನ್ನು ಬೆಳೆಸುವುದು ಕಷ್ಟ ಸಾಧ್ಯವಾದೀತು. ಏಕೆಂದರೆ ನಿಮ್ಮ ನೆಲದಡಿಯ ಅಥವಾ ಭೂಮಿಯೊಳಗಿನ ನೀರಿನ ಮೂಲ ಕೆಳಗೆ ಹೋಗುತ್ತಾ ಇದೆ ಮತ್ತು ಇದು ಹೀಗೇನೇ ಮುಂದುವರಿದರೆ ಮುಂದೊಂದು ದಿನ ಈ ಪ್ರದೇಶದ ಜನರು ನೀರಿನ ಕ್ಷಾಮವನ್ನು ಎದುರಿಸಬೇಕಾದೀತು'' ಎಂದಿದ್ದರು. ಇಂತಹ ಒಂದು ಸಮಸ್ಯೆ ಉದ್ಭವಿಸದಂತೆ ಮಾಡಲು ನೀರನ್ನು ಭೂಮಿಯೊಳಕ್ಕೆ ಬಿಡುವ ಅರ್ಥಾತ್ ನೀರು ಇಂಗಿಸುವ ಕಾರ್ಯ ಆಗಬೇಕಾಗಿದೆ ಎನ್ನುವುದು ಇವರ ಮಾತಿನ ತಾತ್ಪರ್ಯವಾಗಿತ್ತು. 2006ನೆ ಇಸವಿಯಲ್ಲಿ ಆಗಿನ ಜಿಲ್ಲಾಧಿಕಾರಿಗಳಾದ ಮಹೇಶ್ವರ ರಾವ್‌ರವರು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆಯನ್ನುಮುಂದಿಟ್ಟು ಮುಂದಕ್ಕೆ ಬರಬಹುದಾದ ಜಲಕ್ಷಾಮದ ತೊಂದರೆಯನ್ನು ತಪ್ಪಿಸಲಿಕ್ಕಾಗಿ ಮಂಗಳೂರಿಗೆ ಪ್ರಮುಖವಾಗಿ ನೀರು ಸರಬರಾಜಾಗುವ, ವರ್ಷದುದ್ದಕ್ಕೂ ತನ್ನ ಮಡಿಲಿನ ಒಸರಿನಿಂದ ನೀರನ್ನು ಹೊರಸೂಸುವ ಕದ್ರಿಗುಡ್ಡೆ ಪ್ರದೇಶದ ಒಸರನ್ನು ಉಳಿತಾಯ ಮಾಡುವ ಸಲುವಾಗಿ ಮತ್ತು ಆ ಪ್ರದೇಶದ ಒಸರಿನ ರಕ್ಷಣೆಗಾಗಿ ಕದ್ರಿ ಅಭಿವೃದ್ಧಿ ಸಮಿತಿಯೊಂದನ್ನು ರಚಿಸಿ ಅಲ್ಲಿಯ ಹೆಚ್ಚಿನ ಪ್ರದೇಶಗಳನ್ನು ಹಸಿರು ಪ್ರದೇಶವನ್ನಾಗಿ ದಾಖಲಿಸಿ ಭೂಮಿ ಅಗೆತ, ಕಟ್ಟಡ ನಿರ್ಮಾಣ ಇತ್ಯಾದಿ ಪರಿಸರವನ್ನು ವಿಛಿದ್ರಗೊಳಿಸುವ ಕೆಲಸಗಳಿಗೆ ತಡೆಯೊಡ್ಡುವ ಕಾರ್ಯವನ್ನು ಮಾಡಲು ಹೊರಟಿದ್ದರು. ಮೇಲಿನ ಈ ಎರಡು ವ್ಯಕ್ತಿಗಳಿಂದ ಬಂದಂತಹ ಈ ಚಿಂತನೆಯನ್ನು ಬಿಟ್ಟರೆ ಬೇರೆ ಯಾವುದೇ ಅಧಿಕಾರಿಯಾಗಲಿ ಅಥವಾ ರಾಜಕಾರಣಿಯಾಗಲಿ ನೀರಿನ ಬಗ್ಗೆ ಹೆಚ್ಚಾಗಿ ಯೋಚಿಸಿ ಕಾರ್ಯೋನ್ಮುಖರಾದುದಿಲ್ಲ.

ನಮ್ಮ ಜಿಲ್ಲೆಯಲ್ಲಿ ನೀರಿನ ಒಸರು ಕಡಿಮೆಯಾಗಲು ಹಲವು ಕಾರಣಗಳಿವೆ. ಸುಮಾರು 60ನೆ ದಶಕದವರೆಗೆ ಬಂದರು ಪ್ರದೇಶದಿಂದ ಸಾಮಾನು ಸರಂಜಾಮುಗಳನ್ನು ದೋಣಿಗಳ ಮೂಲಕ ಬಂಟ್ವಾಳ, ಉಪ್ಪಿನಂಗಡಿ ಇತ್ಯಾದಿ ನದಿ ತಟದಲ್ಲಿರುವ ಊರುಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಆಗ ಕಡಿಮೆ ಇದ್ದ ಲಾರಿಗಳ ಸಂಖ್ಯೆ ಮತ್ತು ನದಿಪಾತ್ರವು ಆಳವಾಗಿದ್ದು ಮಳೆಗಾಲ ಕಳೆದು ಸೆಕೆಗಾಲದ ತನಕವೂ ನೇತ್ರಾವತಿ ನದಿಯಲ್ಲಿ ನೀರು ಇರುತ್ತಿದ್ದು, ದೋಣಿ ಸಂಚಾರ ಸುಗಮವಾಗಿ ಸಾಗುತ್ತಿದ್ದುದು. ದೋಣಿಗಳನ್ನು ಬಿಟ್ಟರೆ ಆಗಿನ ಕಾಲದಲ್ಲಿ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಗಳಲ್ಲಿ ಸಾಗಿಸಬೇಕಾಗುತ್ತಿತ್ತು. ಏರು ತಗ್ಗಾದ ರಸ್ತೆಗಳಲ್ಲಿ ಅಷ್ಟು ದೂರದವರೆಗೆ (30ರಿಂದ 50 ಕಿ.ಮೀ) ಭಾರದ ಹೊರೆಯನ್ನು ಎತ್ತಿನ ಗಾಡಿಗಳಲ್ಲಿ ಕಳುಹಿಸುವುದು ಶ್ರಮದಾಯಕವೂ, ಕಷ್ಟಕರವೂ ಆಗಿತ್ತಲ್ಲದೆ ಹೆಚ್ಚು ಸಮಯವನ್ನೂ ತೆಗೆದುಕೊಳ್ಳುತ್ತಿತ್ತು. ನದಿ ತಟದಲ್ಲಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದ ರೈತರು ಕಡು ಬೇಸಗೆಯ ಎಪ್ರಿಲ್, ಮೇ ತಿಂಗಳಲ್ಲಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದ ಸಂದರ್ಭದಲ್ಲಿ ತಮ್ಮ ತೋಟ-ಗದ್ದೆಗಳಿಗೆ ನದಿಯಿಂದ ಹೂಳೆತ್ತುವ ಮೂಲಕ ನದಿಯಲ್ಲಿರುವ ಫಲವತ್ತಾದ ಮಣ್ಣನ್ನು ತೋಟ-ಗದ್ದೆಗಳಿಗೆ ಹಾಕುತ್ತಿದ್ದರು. ಇದರಿಂದಾಗಿ ಅವರಿಗೆ ಫಲವತ್ತಾದ ಗೊಬ್ಬರದ ಅಂಶಗಳಿಂದ ಕೂಡಿದ ಮಣ್ಣು ಸಿಗುವುದರ ಜೊತೆಗೆ ಹೂಳೆತ್ತುವ ಕಾರಣವಾಗಿ ನದಿಯು ಆಳವಾಗಿ ವರ್ಷದುದ್ದಕ್ಕೂ ನೀರು ಅಲ್ಲಿಯೇ ಶೇಖರವಾಗಿರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದರ ಜೊತೆಗೆ ಕೆಲಸಗಾರರು ದುಬಾರಿಯಾಗಿರುವುದರಿಂದ ರೈತರು ನದಿಯಿಂದ ಮಣ್ಣು ತೆಗೆಯು ವುದನ್ನು ನಿಲ್ಲಿಸಿದ್ದು ನದಿಗಳಲ್ಲಿ ಕೆಸರು, ಹೊಯ್ಗೆ, ಮಣ್ಣು ಇತ್ಯಾದಿಗಳು ತುಂಬಿಕೊಂಡು ನೀರು ನಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ನೀರು ಇಂಗುವ ಕೆಲಸ ನದಿಗಳ ಮೂಲಕ ಬೃಹತ್ ರೂಪದಲ್ಲಿ ನಡೆಯುತ್ತಿಲ್ಲ.

ಹಿಂದಿನ ಕಾಲದಲ್ಲಿ ಜಿಲ್ಲೆಯ ಮತ್ತು ಮುಖ್ಯವಾಗಿ ನಗರದ ಹಲವು ಪ್ರದೇಶಗಳಲ್ಲಿ ಕಾಪಿಕಾಡು ಎನ್ನುವ ಸಣ್ಣ ಸಣ್ಣ ಕಾಡು ಪ್ರದೇಶಗಳು ಇರುತ್ತಿತ್ತು. ಈ ಕಾಪಿಕಾಡು ಎಂದರೆ ''ಕಾಪಾಡುವ ಕಾಡು'' ಅಥವಾ ತುಳುವಿನಲ್ಲಿ ''ಕಾಪುನ ಕಾಡ್'' ಎಂದು ಅರ್ಥ. ಹಿಂದಿನ ಕಾಲದಲ್ಲಿ ನಗರದ ಜನನಿಬಿಡ ಪ್ರದೇಶಗಳಲ್ಲಿ ಸಣ್ಣ ಕಾಡುಗಳನ್ನು ಬೆಳೆಸುತ್ತಿದ್ದು ಈ ಕಾಡುಗಳು ದಟ್ಟವಾದ ಮರಗಳಿಂದ ಕೂಡಿದ್ದು ಅವುಗಳಿಂದ ಉದುರಿದ ತರಗೆಲೆಗಳು ಆ ಮರದಡಿಗಳಲ್ಲೇ ಇದ್ದು ಮಳೆಗಾಲದ ನೀರನ್ನು ಹೀರಿ ಭೂಮಿಯಡಿಗೆ ಬಿಡುತ್ತಿದ್ದುದರಿಂದ ಆ ಪ್ರದೇಶದ ಸುತ್ತಮುತ್ತಲಿನ ಬಾವಿಗಳಲ್ಲಿ ವರ್ಷಂಪ್ರತಿ ಬೇಕಾದಷ್ಟು ನೀರು ಸಿಗುತ್ತಿತ್ತು. ಆದರೆ ಇವತ್ತು ಮರಗಳಿಲ್ಲದ, ಹೆಸರಿಗೆ ಮಾತ್ರ ಇರುವ ಕಾಪಿಕಾಡು, ಕಾಪ್ರಿಗುಡ್ಡೆ ಇತ್ಯಾದಿ ಪ್ರದೇಶಗಳಲ್ಲಿರುವ ಬಾವಿಗಳಲ್ಲಿ ಸೆಕೆಗಾಲದಲ್ಲಿ ನೀರು ಬತ್ತಿ ಹೋಗುವ ಪರಿಸ್ಥಿತಿ ಉಂಟಾಗಿದೆ.

ಓರ್ವ ವಿದ್ಯಾವಂತ ವ್ಯಕ್ತಿ ಒಂದು ಗ್ರಾಮೀಣ ಪ್ರದೇಶದಲ್ಲಿ ಐದು ಎಕರೆಯಷ್ಟು ವಿಸ್ತಾರವಾದ ಗುಡ್ಡ ಪ್ರದೇಶವನ್ನು ಖರೀದಿಸಿದರು. ಅವರ ಉದ್ದೇಶ ಆ ಬರಡು ಜಮೀನಿನಲ್ಲಿ ಮೂರು ಬೋರ್‌ವೆಲ್‌ಗಳನ್ನು ಕೊರೆಯುವುದು ಮತ್ತು ತೆಂಗಿನ ಸಸಿಗಳನ್ನು ನೆಟ್ಟು ಬೋರ್‌ವೆಲ್ ಮುಖಾಂತರ ನೀರು ಒದಗಿಸಿ ಒಂದು ಸುಂದರ ತೋಟವನ್ನು ನಿರ್ಮಿಸುವುದಾಗಿತ್ತು. ಯೋಚಿಸಿದಂತೆಯೇ ಮಾಡಿದರು ಕೂಡ. ಆದರೆ ಮುಂದಿನ ಸೆಕೆಗಾಲದಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆಯುಂಟಾಗಿ ಗಿಡಗಳಿಗೆ ಸರಿಯಾಗಿ ನೀರು ಸಿಗದೆ ಗಿಡಗಳು ಬಿಸಿಲಿಗೆ ಒಣಗುತ್ತಾ ಬಂದವು. ಒಂದೆರಡು ವರ್ಷಗಳಲ್ಲಿ ಗಿಡಗಳ ಬೆಳವಣಿಗೆ ಕುಂಠಿತವಾದುದಲ್ಲದೆ ಕೆಲವು ಗಿಡಗಳು ಸತ್ತು ಹೋದವು. ನಷ್ಟದೊಡನೆ ಪ್ರಯತ್ನದ ವೈಫಲ್ಯದಿಂದ ಬೇಸತ್ತು ಅವರು ಆ ಸ್ಥಳವನ್ನು ಪರಿಚಯದ ಇನ್ನೊಬ್ಬರಿಗೆ ಕಡಿಮೆ ದರದಲ್ಲಿ ಮಾರಿ ಕೈತೊಳೆದುಕೊಂಡರು. ಈ ಸ್ಥಳವನ್ನು ಕೊಂಡುಕೊಂಡ ವ್ಯಕ್ತಿ ಹೆಚ್ಚು ಬುದ್ಧಿವಂತರೂ, ಜಾಣರೂ ಆಗಿದ್ದರು. ಅವರು ಪ್ರತೀ ನಾಲ್ಕು ಸಸಿಗಳ ನಡುವೆ ಒಂದೊಂದು ಹೊಂಡಗಳನ್ನು ನಿರ್ಮಿಸಿದರು. ಮೂರು ಬೋರ್‌ವೆಲ್‌ಗಳ ಸುತ್ತಲೂ ಕೂಡ ನೀರು ಇಂಗಿಸುವ ಕ್ರಮವನ್ನು ಕೈಗೊಂಡರು. ಇದರ ಪರಿಣಾಮವಾಗಿ ಮುಂದಿನ ಮಳೆಗಾಲದುದ್ದಕ್ಕೂ ಈ ಹೊಂಡಗಳಲ್ಲಿ ನೀರು ನಿಂತು ಅದು ಇಂಗುವ ಮೂಲಕ ಆ ಪ್ರದೇಶದಲ್ಲಿ ನೀರಿನ ಒಸರು ಹೆಚ್ಚಾಗಿ ಮುಂದಿನ ಬೇಸಿಗೆಯಲ್ಲಿ ಆ ಮೂರು ಬೋರ್‌ವೆಲ್‌ಗಳಲ್ಲಿ ಸಮೃದ್ಧವಾಗಿ ನೀರು ಲಭಿಸಿತು. ಇವತ್ತು ಆ ಪ್ರದೇಶ ಒಂದು ಸುಂದರ ತೋಟವಾಗಿ ಪರಿವರ್ತಿತವಾಗಿದೆ. ಮಾತ್ರವಲ್ಲದೆ, ಲಾಭದಾಯಕವೂ ಆಗಿದೆ.

ನನ್ನ ಮನೆ ಪಟ್ಟಣ ಪ್ರದೇಶದಿಂದ ಹೊರಗಿದ್ದು ಅಲ್ಲಿ ನಗರ ನೀರು ಸರಬರಾಜು ಯೋಜನೆ ಇರುವುದಿಲ್ಲ. ನಮ್ಮ ಮನೆ ಇರುವ ಪ್ರದೇಶ ಎತ್ತರದ ಪ್ರದೇಶವಾಗಿದ್ದು ವರ್ಷಂಪ್ರತಿ ಅಲ್ಲಿಯ ಜನರೆಲ್ಲರೂ ಬೇಸಿಗೆ ಕಾಲದಲ್ಲಿ ನೀರಿನ ಅಭಾವವನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಪ್ರತಿ ಮೇ ತಿಂಗಳಲ್ಲಿ ನೀರಿನ ಕೊರತೆ ನಮ್ಮನ್ನು ಕಾಡುತ್ತಿತ್ತು. ಆದರೆ ಮೂರು ವರ್ಷಗಳ ಹಿಂದೆ ಪರಿಣಿತರ ಸಲಹೆಯಂತೆ ಬಾವಿಯ ಪಕ್ಕದಲ್ಲಿ ನಾಲ್ಕಡಿ ಆಳದ ಹೊಂಡಗಳನ್ನು ನಿರ್ಮಿಸಿ ಅವುಗಳ ಮೂಲಕ ಮಳೆ ನೀರನ್ನು ಇಂಗಿಸುವ ಪ್ರಯತ್ನವನ್ನು ಮಾಡಿದುದರಿಂದ ಕಳೆದ ಎರಡು ವರ್ಷಗಳಿಂದ ಮಳೆಗಾಲದ ಆರಂಭದವರೆಗೂ ನಮ್ಮ ಬಾವಿಯಲ್ಲಿ ನೀರು ಖಾಲಿಯಾಗದೆ ನೀರಿನ ಕೊರತೆ ನಮ್ಮನ್ನೀಗ ಕಾಡುವುದಿಲ್ಲ. ಇದು ನನ್ನೊಬ್ಬನ ಅನುಭವವಾಗಿರದೆ, ಇದನ್ನು ಅನುಸರಿಸಿದವರೆಲ್ಲರ ಅನುಭವವೂ ಆಗಿದೆ.

ಮೇಲಿನ ಅಂಶಗಳನ್ನು ಗಮನಿಸಿದಾಗ ಭೂಮಿಯಡಿಯ ಜಲ ಮಟ್ಟವನ್ನು ಏರಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಾಗಿದೆ ಎನ್ನುವುದು ವೇದ್ಯವಾಗುತ್ತದೆ. ಆದರೆ ಈ ವಿಷಯದತ್ತ ಬುದ್ಧಿ ವಂತರು, ವಿಚಾರವಂತರು ಹಾಗೂ ವಿದ್ಯಾ ವಂತರು ಎಂದು ಗುರುತಿಸಲ್ಪಟ್ಟ ನಮ್ಮೂರಿನ ''ಬುದ್ಧಿವಂತ'' ಜನರಾಗಲಿ, ರಾಜಕಾರಣಿಗಳೇ ಆಗಲಿ ಅಥವಾ ಅಧಿಕಾರಿಗಳೇ ಆಗಲಿ ಎಂದೂ ಯೋಚಿಸಿಲ್ಲ.
ದೇಶದಲ್ಲೇ ಅತ್ಯಂತ ಹೆಚ್ಚು ಮಳೆಯಾಗುವ ಜಿಲ್ಲೆಗಳಲ್ಲಿ ನಮ್ಮದೂ ಒಂದು. ನೀರು ಸಮೃದ್ಧವಾಗಿ ಇಲ್ಲಿ ಲಭಿಸುತ್ತಿತ್ತಾದುದರಿಂದ ಸರಕಾರವಾಗಲಿ ಅಥವಾ ಇಲ್ಲಿಯ ಜನರಾಗಲಿ ನೀರಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನಮ್ಮ ನಗರ ಹಾಗೂ ಜಿಲ್ಲೆಯಲ್ಲಿ ಇದ್ದಂತಹ ಹಲವಾರು ಕೆರೆ ಹಾಗೂ ಬಾವಿಗಳು ಮುಚ್ಚಲ್ಪಟ್ಟರೂ ನಾವು ಅದಕ್ಕೆ ಹೆಚ್ಚು ಗಮನವನ್ನು ಹರಿಸಲಿಲ್ಲ. ಜಪ್ಪು ಪ್ರದೇಶದಲ್ಲಿರುವ ಗುಜ್ಜೆ ಕೆರೆಯನ್ನು ಅದರಲ್ಲಿ ತುಂಬಿರುವ ಕೆಸರು ಮಣ್ಣು ಇತ್ಯಾದಿಗಳನ್ನು ತೆಗೆದು ಸ್ವಚ್ಛ ಮಾಡಿ ಅದನ್ನು ಪುನರುಜ್ಜೀವನಗೊಳಿಸುವ ಕೆಲಸ ಸುಮಾರು 15 ವರ್ಷಗಳ ಹಿಂದೆ ಆರಂಭವಾಗಿದ್ದು ಇಂದಿಗೂ ಅಪೂರ್ಣ ಸ್ಥಿತಿಯಲ್ಲೇ ಇದೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ಇದ್ದಂತಹ ಬೃಹತ್ ಗಾತ್ರದ ಎಮ್ಮೆಕೆರೆ ಎಲ್ಲರ ನಿರ್ಲಕ್ಷದಿಂದಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಇದರ ಹೂಳೆತ್ತಿ ಇದನ್ನು ಪುನರುತ್ಥಾನಗೊಳಿಸುವ ಬದಲು ಅಧಿಕಾರ ವರ್ಗ ಅದರ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ಹಿಂದೆ 1970ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ನಿನವರು ಸಣ್ಣ-ದೊಡ್ಡ ಗಾತ್ರದ ಮೀನುಗಳನ್ನು ಈ ಕೆರೆಯಲ್ಲಿ ಸಾಕಿ ಬೆಳೆಸಿ ಮಾರಾಟ ಮಾಡುತ್ತಿದ್ದರು. ಬಹುಶಃ ಬೇರೆ ಕೆರೆಗಳಿಗೂ ಈ ಮೀನು ಮರಿಗಳನ್ನು ಬಿಡಲಾಗುತ್ತಿತ್ತು. ನಗರದ ಕರಂಗಲ್ಪಾಡಿಯಲ್ಲಿ ಹಿಂದಿನ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯ ಎದುರು ಭಾಗದಲ್ಲಿ ಇದ್ದಂತಹ ಮೇಲ್ಭಾಗದ ಸಣ್ಣ ಕೆರೆ ಮತ್ತು ಕೆಳಭಾಗದ ದೊಡ್ಡ ಕೆರೆ ಇವೆರಡೂ ಈಗ ಮುಚ್ಚಲ್ಪಟ್ಟಿದೆ.

1950-60ರ ದಶಕದಲ್ಲಿ ಮೇಲ್ಭಾಗದಲ್ಲಿರುವ ಸಣ್ಣ ಕೆರೆಯಲ್ಲಿ ಮೀನಿನ ಮರಿಗಳನ್ನು ಉತ್ಪಾದಿಸಿ ದೊಡ್ಡ ಕೆರೆಗಳಿಗೆ ಬಿಡಲಾಗುತ್ತಿತ್ತು. ಕಾವೂರು ಪ್ರದೇಶದಲ್ಲಿರುವ ವಿಶಾಲವಾದ ಕೆರೆ ಇವತ್ತು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದೆ. ಮಹೇಶ್ವರ ರಾವ್‌ರವರು ಜಿಲ್ಲಾಧಿಕಾರಿಯಾಗಿದ್ದಾಗ ಕದ್ರಿ ಗುಡ್ಡೆಯ ಕೆಳಭಾಗದ ಮುಂಡಾಣದಲ್ಲಿ ಇರುವ ಸಣ್ಣ ಕೆರೆಗಳನ್ನು ವಿಸ್ತರಿಸಿ ಅದರ ಸುತ್ತಲೂ ಸುಂದರ ಉದ್ಯಾನವನ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಇಂತಹ ಹಲವಾರು ನತದೃಷ್ಟ ಕೆರೆಗಳು ಹಾಗೂ ನೂರಾರು ಸಂಖ್ಯೆಯ ಬಾವಿಗಳು ಸಂಬಂಧಪಟ್ಟವರೆಲ್ಲರ ನಿರ್ಲಕ್ಷದಿಂದಾಗಿ ಮುಚ್ಚಲ್ಪಟ್ಟು ನೀರು ಇಂಗುವ ಕೆಲಸಕ್ಕೆ ಅಡಚಣೆಯುಂಟಾಗಿ ನೆಲದಡಿಯ ನೀರಿನ ಒಸರು ವರ್ಷಂಪ್ರತಿ ಇಳಿಮುಖವಾಗುತ್ತಾ ಬಂದಿದೆ.

ಅರವಿಂದ ಶ್ರೀವಾಸ್ತವ್‌ರವರು ಜಿಲ್ಲಾಧಿಕಾರಿಯಾಗಿದ್ದಾಗ ಶ್ರೀಯುತ ಅಮೃತ ಸೋಮೇಶ್ವರವರು ಮತ್ತು ಈ ಲೇಖಕ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಸೋಮೇಶ್ವರದಲ್ಲಿ ಸೋಮನಾಥ ದೇವಾಲಯದ ಬಳಿ ಪಾಳುಬಿದ್ದಿರುವ ದೊಡ್ಡ ಕೆರೆಯೊಂದನ್ನು ಅಭಿವೃದ್ಧಿಪಡಿಸಬೇಕೆಂದು ವಿನಂತಿಸಿದ್ದೆವು. ನನ್ನ ಅಂದಾಜು ಪ್ರಕಾರ ಈ ಕೆರೆ ಸುಮಾರು 30 ಅಡಿ ಆಳವಿದ್ದು, ಅದರಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತಿತ್ತು. ಬಹಳಷ್ಟು ಮೀನು ಸಂಕುಲಗಳು ಅದರಲ್ಲಿದ್ದವು. ಸ್ಥಳೀಯ ಮೀನುಗಾರರು ಮತ್ಸಕ್ಷಾಮವಿದ್ದಂತಹ ಸಮಯದಲ್ಲಿ ಈ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು. ಈ ಕೆರೆಯ ನೀರನ್ನು ಉಪಯೋಗಿಸಿಕೊಂಡು ಗ್ರಾಮಸ್ಥರು ಕೆರೆಯ ದಡದ ಬಂಡೆಕಲ್ಲುಗಳ ಮೇಲೆ ಬಟ್ಟೆ ಒಗೆಯುತ್ತಿದ್ದರು. ಈ ರೀತಿಯಾಗಿ ಬಹುಪಯೋಗಿಯಾಗಿದ್ದ ಈ ಕೆರೆ ಎಲ್ಲರ ನಿರ್ಲಕ್ಷದಿಂದಾಗಿ ತನ್ನ ಒಡಲೊಳಗೆ ಕೆಸರು, ಹೊಯ್ಗೆ, ಮಣ್ಣು ಇತ್ಯಾದಿಗಳನ್ನು ತುಂಬಿಸಿಕೊಂಡು 30 ಅಡಿ ಆಳವಿದ್ದ ಕೆರೆ ಬಹುತೇಕ ಮುಚ್ಚಿಹೋಗಿ ಮೇಲ್ಭಾಗದಲ್ಲಿ ನೀರಿನ ಸಸ್ಯ ಸಂಕುಲಗಳು ಬೆಳೆದು ಅನುಪಯುಕ್ತವಾಗಿತ್ತು. ಅರವಿಂದ ಶ್ರೀವಾತ್ಸವ್‌ರವರು ಅಮೃತರ ಪತ್ರಕ್ಕೆ ಸಕಾರಾತ್ಮಕವಾಗಿ ಉತ್ತರಿಸಿದರೂ ಏನೂ ಕ್ರಮವನ್ನು ಜರಗಿಸದೇ ಹೋದರು. ಆ ಬಳಿಕ ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ಮಹೇಶ್ವರ ರಾವ್‌ರವರಿಗೂ ಈ ವಿಷಯದಲ್ಲಿ ನಾನು ಪುನಃ ಪತ್ರ ಬರೆದುದಲ್ಲದೆ, ಒಂದು ದಿನ ಅವರನ್ನು ಅಮೃತರೊಡನೆ ಕೆರೆಯಿದ್ದಲ್ಲಿಗೆ ಕರೆದುಕೊಂಡು ಹೋಗಿ ಅದರ ದುಸ್ಥಿತಿಯನ್ನು ತೋರಿಸಿದ್ದೆ. ಇದೆಲ್ಲದರ ಪರಿಣಾಮವಾಗಿ ಕೆರೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದೆಯಾದರೂ, ನಾವಿತ್ತ ಹೆಚ್ಚಿನ ಸಲಹೆಗಳನ್ನು ಅನುಷ್ಠಾನಿಸಲಾಗಿಲ್ಲ ಎಂಬುದು ವಿಷಾದನೀಯ.

ಸಮೃದ್ಧ ಜಿಲ್ಲೆಯ ಭವಿಷ್ಯಕ್ಕಾಗಿ...

ಸಾಧ್ಯವಿದ್ದಲ್ಲೆಲ್ಲಾ ಮುಖ್ಯವಾಗಿ ಸರಕಾರಿ ಸ್ಥಳಗಳಲ್ಲಿ ಸಣ್ಣ ಸಣ್ಣ ಗುಂಡಿಗಳನ್ನು ತೋಡಿ ಮಳೆಗಾಲದಲ್ಲಿ ನೀರು ಇಂಗಿಸುವುದು. ಜನರಿಗೆ ಇದರ ಉಪಯುಕ್ತತೆಯ ಬಗ್ಗೆ ತಿಳುವಳಿಕೆ ಕೊಟ್ಟು ಅವರ ಹಿತ್ತಲುಗಳಲ್ಲಿ ನೀರ ಗುಂಡಿಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವುದು.
ಛಾವಣಿಯ ತೇರಸಿನ ನೀರನ್ನು ಬಾವಿ ಇದ್ದಲ್ಲೆಲ್ಲ ಬಾವಿಗಳಿಗೆ ಬಿಡುವುದು.
 ನದಿಗಳಲ್ಲಿ ಹೂಳೆತ್ತುವ ಮೂಲಕ ಅವುಗಳನ್ನು ಆಳವಾಗಿಸಿ ವರ್ಷದುದ್ದಕ್ಕೂ ನೀರು ನಿಲ್ಲುವಂತೆ ಮಾಡುವುದು.
 ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಸಂಪ್‌ಗಳನ್ನು ನಿರ್ಮಿಸಲು ಆದೇಶಿಸುವುದು.
 ಗಿಡಗಳನ್ನು ಹೆಚ್ಚಾಗಿ ಬೆಳೆಸಲು ಕ್ರಮ ಕೈಗೊಳ್ಳುವುದು. ಸಣ್ಣ ದಟ್ಟವಾದ ಕಾಡುಗಳನ್ನು ಖಾಲಿ ಸ್ಥಳವಿದ್ದಲ್ಲೆಲ್ಲ ನಿರ್ಮಿಸುವುದು.
 ಖಾಲಿ ಬಿದ್ದ ಅನುಪಯುಕ್ತ ಚಿಕ್ಕ ಸರಕಾರಿ ಸ್ಥಳಗಳಿದ್ದಲ್ಲಿ ಅವುಗಳನ್ನು ಗಿಡ ನೆಟ್ಟು ಬೆಳೆಸಿ ಪೋಷಿಸಲು ಘೆಎಗಳಿಗೆ, ಸಂಘ ಸಂಸ್ಥೆಗಳಿಗೆ, ವಿದ್ಯಾ ಸಂಸ್ಥೆಗಳಿಗೆ ಅಥವಾ ಸಹಕಾರಿ ಸಂಘಗಳಿಗೆ ಬೆಳೆಸಿದ ಮರಗಳ ಫಲವನ್ನನುಭವಿಸುವ ಕರಾರಿನೊಡನೆ ವಹಿಸಿಕೊಡುವುದು.
ನಮ್ಮ ಜಿಲ್ಲೆಗೆ ಅತೀ ಮುಖ್ಯವಾದ ಜಲಾಶಯವೊಂದನ್ನು ನಿರ್ಮಿಸುವ ಮೂಲಕ ಮಳೆ ನೀರನ್ನು ಅದರಲ್ಲಿ ಶೇಖರಿಸುವ ಕೆಲಸವಾಗಬೇಕು.
ರಸ್ತೆ ಪುನರ್ ನಿರ್ಮಾಣ ಮಾಡುವಾಗ, ಹೊಸ ರಸ್ತೆ ನಿರ್ಮಿಸುವಾಗ ಅಥವಾ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಗುಡ್ಡ ಪ್ರದೇಶವನ್ನು ನೆಲಸಮ ಮಾಡಿ, ರಸ್ತೆಗೆ ಮಣ್ಣು ತೆಗೆಯುವುದನ್ನು ನಿಷೇಧಿಸಬೇಕು. ಇದರಿಂದಾಗಿ ಆ ಗುಡ್ಡ ಪ್ರದೇಶದಲ್ಲಿರುವ ಗಿಡ-ಮರಗಳೆಲ್ಲವೂ ನಾಶವಾಗುತ್ತವೆ. ಇದರ ಬದಲಾಗಿ ನದಿಗಳಿಂದ ಹೂಳೆತ್ತುವ ಮೂಲಕ ಮಣ್ಣನ್ನು ತೆಗೆದು ರಸ್ತೆ ಮಾಡಲು ಉಪಯೋಗಿಸಬಹುದು. ಇದರಿಂದ ಬದಿಯು ಆಳವಾಗುವುದರ ಜೊತೆಗೆ ನದಿಯ ಮಧ್ಯೆ ತಲೆ ಎತ್ತಿರುವ ಸಣ್ಣ ದ್ವೀಪಗಳನ್ನು ತೆಗೆದು ನದಿಗಳನ್ನು ಆಳವೂ, ವಿಸ್ತಾರವೂ ಆಗಿಸುವುದು ಸಾಧ್ಯ.
ಪರಿಸರದ ಬಗ್ಗೆ ಆಸಕ್ತಿ ಇರುವ, ಪ್ರೀತಿಯಿರುವ ನೂರಾರು ಜನರು ನಮ್ಮಲ್ಲಿದ್ದಾರೆ. ಅವಕಾಶವಂಚಿತರಾದ ಅವರೆಲ್ಲರನ್ನೂ ಒಟ್ಟುಗೂಡಿಸಿ ಅವರಿಗೊಂದು ವೇದಿಕೆ ನಿರ್ಮಿಸುವುದರ ಮೂಲಕ ಇಂತಹ ಚಟುವಟಿಕೆಗಳನ್ನು ಹೆಚ್ಚು ವ್ಯವಸ್ಥಿತ ರೀತಿಯಲ್ಲಿ ನಡೆಸಬಹುದು.

share
ಎನ್. ಜಿ. ಮೋಹನ್, ಮಂಗಳೂರು
ಎನ್. ಜಿ. ಮೋಹನ್, ಮಂಗಳೂರು
Next Story
X