ವಲಸಿಗ ಇಂಜಿನಿಯರ್‌ಗಳಿಗೆ ಪರೀಕ್ಷೆ, ಸಂದರ್ಶನ ಕಡ್ಡಾಯ
ಸೌದಿ ಸಂಕಟ
ಜಿದ್ದಾ, ಜೂ. 7: ಮೂರು ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವ ಸೌದಿ ಅರೇಬಿಯದ ಹೊರಗಿನ ಯಾವುದೇ ಇಂಜಿನಿಯರ್ ನೇಮಕಾತಿಗೆ ಅನುಮೋದನೆ ನೀಡದಿರಲು ಸೌದಿ ಇಂಜಿನಿಯರ್‌ಗಳ ಮಂಡಳಿಯ ನಿರ್ದೇಶಕರ ಸಮಿತಿ ತೀರ್ಮಾನಿಸಿದೆ.
ಅದೇ ವೇಳೆ, ವಿದೇಶಗಳಿಂದ ನೇಮಕಗೊಂಡ ಎಲ್ಲರಿಗೂ ವೃತ್ತಿಪರ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಕಡ್ಡಾಯಗೊಳಿಸಲೂ ಅದು ನಿರ್ಧರಿಸಿದೆ.
ರಾಷ್ಟ್ರೀಯ ಯೋಜನೆಗಳ ಕಳಪೆ ಅನುಷ್ಠಾನದ ಸವಾಲನ್ನು ನಿಭಾಯಿಸಲು ನಿರ್ದೇಶಕರ ಸಮಿತಿಯು ಈ ಪರಿಹಾರವನ್ನು ಸೂಚಿಸಿದೆ ಎಂದು ನಿರ್ದೇಶಕರ ಸಮಿತಿಯ ಅಧ್ಯಕ್ಷ ಜಮೀಲ್ ಅಲ್-ಬಗಾವಿ ತಿಳಿಸಿದರು.
ಯವುದೇ ವೃತ್ತಿ ಅನುಭವವಿಲ್ಲದ ಹೊಸಬರನ್ನು ಕಂಪೆನಿಗಳು ಮತ್ತು ಇಂಜಿನಿಯರಿಂಗ್ ಕಚೇರಿಗಳು ನೇಮಿಸುತ್ತಿರುವ ವಿಚಾರವೂ ಸಮಿತಿಯ ಗಮನಕ್ಕೆ ಬಂದಿದೆ. ಕೆಲವರಿಗೆ ಇಂಜಿನಿಯರಿಂಗ್ ವೃತ್ತಿಯನ್ನು ಮಾಡುವ ಅರ್ಹತೆಗಳೇ ಇರುವುದಿಲ್ಲ, ಆದರೆ ಅವರು ವಿವಿಧ ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡುತ್ತಾರೆ. ಇದು ಕಾಮಗಾರಿಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ ಹಾಗೂ ರಾಷ್ಟ್ರೀಯ ಆರ್ಥಿಕತೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಾನಿ ಮಾಡಿದೆ ಎಂದರು.





