ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಶ್ರದ್ಧೆ, ಪೋಷಕರ ಸಂಪರ್ಕ ಅಗತ್ಯ

ಸೊರಬ, ಜೂ.7: ಇಲಾಖೆಯೊಂದಿಗೆ ಪೋಷಕರು ಸಮರ್ಪಕವಾಗಿ ಕೈ ಜೋಡಿಸಿದರೆ ಸರಕಾರಿ ಶಾಲೆಗಳು ಉನ್ನತ ಫಲಿತಾಂಶ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಸೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನೆ, ಅಭಿವಂದನೆ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕಡಸೂರಿನಂತಹ ಗ್ರಾಮೀಣ ಪ್ರದೇಶದ ಪ್ರೌಢಶಾಲೆಯು ತಾಲೂಕು ಮಟ್ಟದಲ್ಲಿ ಶೇ.97 ಫಲಿತಾಂಶ ನೀಡುವ ಮೂಲಕ ತಾಲೂಕಿಗೆ ಎರಡನೆ ಸ್ಥಾನಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕ ವೃಂದದವರ ಅಪರಿಮಿತ ಶ್ರದ್ಧೆ, ಕ್ರಿಯಾಶೀಲತೆ ಕಾರಣವಾಗಿದೆ, ಇಂತಹ ಶಾಲೆಗೆ ಪೋಷಕರ ಸಂಪರ್ಕ ಹಾಗೂ ಸರಕಾರದ ಅಗತ್ಯ ಸವಲತ್ತು ದೊರೆತರೆ ಶೇ.100 ಫಲಿತಾಂಶ ನೀಡುವುದು ಕಷ್ಟವೇನಲ್ಲ ಎಂದ ಅವರು, ಗ್ರಾಮಸ್ಥರ ಸಹಕಾರದ ಜೊತೆಯಲ್ಲಿ ಶಿಕ್ಷಕರ ಶ್ರಮದಿಂದ ಎರಡನೆ ಬಾರಿ ಉತ್ತಮ ಫಲಿತಾಂಶ ನೀಡಿರುವ ಸರಕಾರಿ ಶಾಲೆಯ ಭೌತಿಕ ಬೆಳವಣಿಗೆಯತ್ತ ಗಮನಹರಿಸುವಲ್ಲಿ ಸರಕಾರ ಮುಂದಾಗಬೇಕಿದೆ ಎಂದರು.
ಮುಟಗುಪ್ಪೆಗ್ರಾಪಂ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಈ ಶಾಲೆಗೆ ನಾಲ್ಕು ಕೊಠಡಿಗಳ ತುರ್ತು ಅವಶ್ಯವಿದೆ, ಈ ಬಗ್ಗೆ ಹಲವು ಸಲ ಸರಕಾರದ ಗಮನಕ್ಕೆ ತಂದರೂ ಸಹ ಈ ವರೆಗೂ ಅನುದಾನ ದೊರೆತಿಲ್ಲ, ಗ್ರಾಮಾಂತರ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿದರೆ ಸರಕಾರಿ ಶಾಲೆಗಳು ಇನ್ನಷ್ಟು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತವೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಸಮಿತಿ, ಪೋಷಕರು, ಗ್ರಾಮಸ್ಥರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಶಾಲಾ ಫಲಿತಾಂಶ ಪ್ರಗತಿಗೆ ಶ್ರಮವಹಿಸಿದ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಕಡಸೂರು ಬಸವಣ್ಯಪ್ಪ, ಪರಿಸರ ಜಾಗೃತಿ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಶಾಲಾಭಿವೃದ್ಧಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ರಾಮಪ್ಪ, ಲಿಂಗರಾಜ್ ಗೌಡ ಕೋಣನಮನೆ, ಮುಖ್ಯ ಶಿಕ್ಷಕ ಜಿ.ಎನ್ ಅಲಿಗೇರಿ, ಶಿಕ್ಷಕರಾದ ಪರಮೇಶ್ವರಪ್ಪ, ಬೈರಮ್ಮ, ಶಿವಲೀಲಾ ದೊಡ್ಡಮನಿ, ಮಂಜುನಾಥ ಶಾಸ್ತ್ರಿ, ವಿದ್ಯಾರ್ಥಿಗಳಾದ ಅಮೂಲ್ಯ, ರಾಜೇಶ್, ಸ್ಫೂರ್ತಿ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.







