ಕ್ಷಿಪಣಿ ನಿಯಂತ್ರಣ ಗುಂಪಿಗೆ ಭಾರತದ ಸೇರ್ಪಡೆ ಖಚಿತ
ಹೊಸದಿಲ್ಲಿ,ಮೇ 25: ಅಣ್ವಸ್ತ್ರ ಪ್ರಸರಣೆ ವಿರೋಧಿ ಒಕ್ಕೂಟವಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪಿಗೆ (ಎಂಟಿಸಿಆರ್)ಭಾರತವನ್ನು ಸೇರ್ಪಡೆಗೊಳಿಸಲು ಒಕ್ಕೂಟದ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆಂದು ಮಂಗಳವಾರ ರಾಜತಾಂತ್ರಿಕರು ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ನಾಳೆ ವಾಶಿಂಗ್ಟನ್‌ನಲ್ಲಿ ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿಗೆ ಇದೊಂದು ಮಹತ್ವದ ರಾಜತಾಂತ್ರಿಕ ಜಯವೆಂದು ಭಾವಿಸಲಾಗಿದೆ.
ಭಾರತವನ್ನು ಎಂಟಿಸಿಆರ್‌ಗೆ ಸೇರ್ಪಡೆ ಗೊಳಿಸುವ ಬಗ್ಗೆ ಆಕ್ಷೇಪಗಳನ್ನು ಎತ್ತಲು 34 ರಾಷ್ಟ್ರಗಳ ಈ ಒಕ್ಕೂಟದ ಸದಸ್ಯರಿಗೆ ಸೋಮವಾರದವರೆಗೆ ಗಡುವು ವಿಧಿಸಲಾಗಿತ್ತು. ಆದರೆ ಯಾವುದೇ ಸದಸ್ಯ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿಲ್ಲವೆಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಈ ರೀತಿಯ ವೌನಸಮ್ಮತಿಯಿಂದಾಗಿ ಎಂಟಿಸಿಆರ್‌ಗೆ ಭಾರತವು ತನ್ನಿಂತಾನೇ ಸೇರ್ಪಡೆಗೊಂಡಂತಾಗಿದೆಯೆಂದು, ಒಕ್ಕೂಟದ ನಾಲ್ಕು ಸದಸ್ಯ ರಾಷ್ಟ್ರಗಳ ರಾಜತಾಂತ್ರಿಕರು ತಿಳಿಸಿದ್ದಾರೆ. ಎಂಟಿಸಿಆರ್‌ಗೆ ಸೇರ್ಪಡೆಯಾದಲ್ಲಿ, ಭಾರತವು ಅತ್ಯುತ್ಕೃಷ್ಟವಾದ ಕ್ಷಿಪಣಿ ತಂತ್ರಜ್ಞಾನವನ್ನು ಖರೀದಿಸಲು ಭಾರತಕ್ಕೆ ಸಾಧ್ಯವಾಗಲಿದೆ. ಯುಎಸ್ ಪ್ರೆಡೇಟರ್‌ನಂತಹ ಅತ್ಯಾಧುನಿಕ ಕಣ್ಗಾವಲು ಡ್ರೋನ್‌ಗಳನ್ನು ಖರೀದಿಸುವ ಅದರ ಹಂಬಲವು ಸಾಕಾರಗೊಳ್ಳಲಿದೆ. ಭಾರತವು ರಶ್ಯದ ಜಂಟಿ ಪಾಲುದಾರಿಕೆಯೊಂದಿಗೆಬ್ರಹ್ಮೋಸ್ ಸೂಪರ್‌ಸೋನಿಕ್ ಕ್ಷಿಪಣಿಯನ್ನು ನಿರ್ಮಿಸುತ್ತಿದ್ದು, ಅದನ್ನು ತೃತೀಯ ರಾಷ್ಟ್ರಗಳಿಗೆ ಮಾರಾಟ ಮಾಡುವ ಭರವಸೆಯನ್ನು ಉಭಯದೇಶಗಳೂ ಹೊಂದಿವೆ. ಎಂಟಿಸಿಆರ್ ಸದಸ್ಯತ್ವದೊಂದಿಗೆ ಭಾರತವು ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದ ಪ್ರಮುಖ ಶಸ್ತ್ರಾಸ್ತ್ರ ಮಾರಾಟಗಾರ ದೇಶಗಳಲ್ಲೊಂದಾಗಲಿದೆ. ಇಟಲಿಯು ಈ ಮೊದಲು ದ್ವಿಪಕ್ಷೀಯ ವಿವಾದವೊಂದರ ಹಿನ್ನೆಲೆಯಲ್ಲಿ ಎಂಟಿಸಿಆರ್‌ಗೆ ಭಾರತದ ಸೇರ್ಪಡೆಯನ್ನು ವಿರೋಧಿಸಿತ್ತು. ಆದರೆ ಈ ಬಾರಿ ಅದು 10 ದಿನಗಳ ಗಡುವಿನ ಅವಧಿಯಲ್ಲಿ ಯಾವುದೇ ಅಕ್ಷೇಪವನ್ನು ವ್ಯಕ್ತಪಡಿಸಿಲ್ಲ. ಎಂಟಿಸಿಆರ್‌ನ ಅಧ್ಯಕ್ಷತೆ ವಹಿಸಿರುವ ನೆದರ್‌ಲ್ಯಾಂಡ್, ಒಕ್ಕೂಟಕ್ಕೆ ಭಾರತದ ಸೇರ್ಪಡೆಯನ್ನು ಸ್ವಾಗತಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಸಲಹೆ ಮಾಡಿತ್ತು.





