ಮುಚ್ಚುತ್ತಿರುವ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ
ಕೋಮು ಸೌಹಾರ್ದ ವೇದಿಕೆ ಒತ್ತಾಯ
ಮೂಡಿಗೆರೆ, ಜೂ.7: ಇತ್ತೀಚೆಗೆ ಮುಚ್ಚಿ ಹೋಗುತ್ತಿರುವ ಬಹಳಷ್ಟು ಸರಕಾರಿ ಶಾಲೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವ ಮೂಲಕ ಬಡವರು, ಶ್ರೀಮಂತರ ಮಕ್ಕಳು ಭೇದ-ಭಾವವಿಲ್ಲದೆ ಸರಕಾರಿ ಶಾಲೆಯಲ್ಲಿ ಓದುವಂತಹ ನೀತಿಯನ್ನು ಜಾರಿಗೊಳಿಸಿಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ್ದು, ಇತ್ತೀಚೆಗಷ್ಟೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರವರು ಕಡಿಮೆ ಸಂಖ್ಯೆಯಿರುವ ಶಾಲೆಗಳನ್ನು ಮುಚ್ಚಿಸಿ ಅಲ್ಲಿರುವ ಮಕ್ಕಳನ್ನು ಬೇರೆ ಶಾಲೆಗಳಿಗೆ ವಾಹನಗಳ ಮೂಲಕ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೊಂದು ರೀತಿ ಶಾಲೆ ಮುಚ್ಚುವುದಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ. ಅದಕ್ಕೆ ಬದಲಾಗಿ ಮಾನ್ಯ ಸಚಿವರು ಕರ್ನಾಟಕದಲ್ಲಿ ಶಿಕ್ಷಣದ ನಿಯಮಗಳನ್ನು ಉಲ್ಲಂಘನೆ ಮಾಡಿದ ಖಾಸಗಿ ಶಾಲೆಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದಿದ್ದಾರೆ.
ಅಲ್ಲದೇ ಖಾಸಗಿ ಶಾಲೆಯವರು ಆಟದ ಮೈದಾನ ಇಲ್ಲದಿದ್ದರೂ, ಪಾಠ ಮಾಡಲು ಕೊಠಡಿಗಳು ಇಲ್ಲದಿದ್ದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಲಿಸಿಕೊಳ್ಳುವ ಮೂಲಕ ಕೆಲ ಕಡೆ ಸರಕಾರಿ ಹಾಸ್ಟೆಲ್‌ಗಳಲ್ಲೇ ಖಾಸಗಿ ಶಾಲೆಯವರು ಪಾಠ ಮಾಡುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಸರಕಾರಿ ಶಾಲೆ ಮತ್ತು ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಕರ್ನಾಟಕ ಸರಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಕೆಲವು ಕಾರಣಗಳಿಂದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ. ಆದ್ದರಿಂದ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ನ್ಯೂನತೆಗಳು ಕಂಡು ಬಾರದಂತೆ ಎಚ್ಚರ ವಹಿಸಿ, ಉಪನ್ಯಾಸಕರ ವೇತನ ಹೆಚ್ಚಳಗೊಳಿಸಬೇಕು. ಸರಕಾರಿ ಶಾಲೆಯಿಂದ ಕರೆತರುವಂತೆ ಆಮಿಷ ಒಡ್ಡುವ ಖಾಸಗಿ ಶಾಲೆಯವರ ಮೇಲೆ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.







