ಚಿಕ್ಕಮಗಳೂರು: ನಗರಸಭೆ ಆದಾಯ ಸೋರಿಕೆ
ಸರ್ವ ಸದಸ್ಯರ ಸಭೆಯಲ್ಲಿ ತನಿಖೆಗೆ ಸಮಿತಿ ರಚನೆ ನಿರ್ಣಯ

ಚಿಕ್ಕಮಗಳೂರು, ಜೂ.7: ನಗರಸಭೆಯಲ್ಲಿ ನಡೆದಿರುವ ಆದಾಯ ಸೋರಿಕೆ ಕುರಿತು ಸಮಗ್ರ ತನಿಖೆ ನಡೆಸಲು ನಗರಸಭೆ ಸದಸ್ಯರ ತನಿಖಾ ಸಮಿತಿ ರಚಿಸಲು ನಿರ್ಣಯವನ್ನು ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷ ದೇವರಾಜ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕೈಗೊಳ್ಳಲಾಯಿತು.
ನಗರಸಭೆಯಲ್ಲಿ ಕೋಟ್ಯಂತರ ರೂ. ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸದಸ್ಯ ಪುಟ್ಟಸ್ವಾಮಿ ಗಮನ ಸೆಳೆದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿನ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರನ್ನೊಳಗೊಂಡ ತನಿಖಾ ಸಮಿತಿ ರಚನೆಗೆ ಸರ್ವ ಸದಸ್ಯರ ಒಮ್ಮತದ ಮೇರೆಗೆ ನಿರ್ಣಯವನ್ನು ಕೈಗೊಳ್ಳಲಾಯಿತು.
ನಗರಸಭಾ ನಾಮಿನಿ ಸದಸ್ಯ ಸಂದೇಶ್ ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕರ ಕೆಲಸ ಆಗಬೇಕಾದರೆ ದಲ್ಲಾಳಿಗಳು ಬೇಕಾ ಎಂದು ಪ್ರಶ್ನಿಸಿದರು. ಅಧ್ಯಕ್ಷರು ಮಧ್ಯ ಪ್ರವೇಶಿಸಲು ಬಂದಾಗ, ತಾನು ಆಯುಕ್ತರಿಗೆ ಪ್ರಶ್ನಿಸಿದ್ದೇನೆ. ಅವರೇ ಉತ್ತರಿಸಲಿ ಎಂದು ಬಿಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ರೂಬಿನ್ ಮೋಸೆಸ್, ಸುರೇಖಾ ಸಂಪತ್, ಕೃಷ್ಣಮೂರ್ತಿ ಬೆಂಬಲಿಸಿದರು.
ಮಹಿಳೆಯೊಬ್ಬರು ಅಗತ್ಯ ಕೆಲಸದ ನಿಮಿತ್ತ ನಗರಸಭೆಗೆ ಬಂದಿದ್ದರು. ಆಗ ದಲ್ಲಾಳಿಯೊಬ್ಬ ಆ ಮಹಿಳೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಆಯುಕ್ತರಿಗೆ ದೂರು ನೀಡಿದಾಗ ಅವರು ದೂರನ್ನು ಸ್ವೀಕರಿಸಲಿಲ್ಲ ಎಂದು ಸಂದೇಶ್ ಹೇಳಿದಾಗ, ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದೆ. ಸದಸ್ಯರು, ಅಧ್ಯಕ್ಷರ ಬಳಿ ಪ್ರಶ್ನೆ ಕೇಳಬೇಕು ಎಂದು ಸದಸ್ಯ ಎಚ್.ಡಿ.ತಮ್ಮಯ್ಯ ಹೇಳುತ್ತಿದ್ದಂತೆ, ನಾಮಿನಿ ಸದಸ್ಯರು ಪ್ರಶ್ನೆ ಕೇಳುವಂತಿಲ್ಲ, ಸಲಹೆ ನೀಡಬಹುದಷ್ಟೆ ಎಂದು ಅಧ್ಯಕ್ಷರು ಹೇಳಿದಾಗ ಕಾವೇರಿದ ವಾತಾವರಣ ತಣ್ಣಗಾಯಿತು.
ಬಿಜೆಪಿ ಸದಸ್ಯ ಸುದೀರ್ ಮಾತನಾಡಿ, ನಗರಸಭೆಯ ಹಳೆ ಪೀಠೋಪಕರಣಗಳ ಖರೀದಿಯಲ್ಲಿ ಗೋಲ್‌ಮಾಲ್ ನಡೆದಿದೆ. ಪೌರಸೇವಾ ನೌಕರರ ಕ್ರೀಡಾಕೂಟಕ್ಕೆ ಲಕ್ಷಾಂತರ ರೂ. ಡ್ರಾ ಮಾಡಲಾಗಿದೆ. ಕುಡಿಯುವ ನೀರಿನ ಟ್ಯಾಂಕ್ ಶುಚ್ಚಿಗೊಳಿಸುವ ಕೆಲಸ ಮುಗಿಸದಿದ್ದರೂ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ವಿವರ ನೀಡುವಂತೆ ಒತ್ತಾಯಿಸಿದ ಅವರು, ಕಸ ಸಂಗ್ರಹಣೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ನಗರಸಭೆ ವರ್ಷಕ್ಕೆ 1.20 ಕೋಟಿ ರೂ. ನೀಡುತ್ತಿದೆ. ಆದರೂ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಪೀಠೋಪಕರಣಗಳ ಖರೀದಿಗೆ ಸಂಬಂಧಿಸಿ ಸಂಬಂಧಿತ ನೌಕರರಿಂದ ಸಮರ್ಪಕ ಮಾಹಿತಿ ಪಡೆದು ಎಲ್ಲ ಸದಸ್ಯರಿಗೆ ನೀಡಲಾಗುವುದು. ಪರಿಸರ ಇಂಜಿನಿಯರ್ ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರಗಿಸಲು ಸರಕಾರಕ್ಕೆ ಶಿಪಾರಸ್ಸು ಮಾಡಿರುವುದಾಗಿ ಸಭೆಯಲ್ಲಿ ತಿಳಿಸಿದರು.
ನಗರಸಭೆಗೆ ಸೇರಿದ ಎಷ್ಟು ಮಳಿಗೆಗಳಿವೆ, ಯಾರು ಎಷ್ಟೆಷ್ಟು ತಿಂಗಳಿನಿಂದ ಬಡಿಗೆ ಉಳಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಬೇಕು. ಬಾಡಿಗೆ ಕಟ್ಟದಿರುವವರಿಗೆ ನೋಟಿಸ್ ಜಾರಿ ಮಾಡಿ, ಮಳಿಗೆಗಳಿಗೆ ಬೀಗ ಹಾಕಿ ಮರು ಟೆಂಡರ್ ಕರೆಯುವಂತೆ ಅಧ್ಯಕ್ಷರು ಕಂದಾಯ ಅಧಿಕಾರಿ ಗುರುಮೂರ್ತಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಭುಜಂಗರಾಜ್ ಅರಸ್, ಪೌರಾಯುಕ್ತೆ ಪಲ್ಲವಿ ಉಪಸ್ಥಿತರಿದ್ದರು.







