ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ
ಕೃಷಿ ಅಭಿಯಾನ
ಚಿಕ್ಕಮಗಳೂರು, ಜೂ.7: ಕೃಷಿಯನ್ನು ಹೆಚ್ಚು ಲಾಭದಾಯಕಗೊಳಿಸಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪದನೆಯನ್ನು ಪಡೆಯವುದು ಅತ್ಯವಶ್ಯಕವಾಗಿದ್ದು, ಬೆಳೆ ವೈವಿದ್ಧೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕವಾದ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಬಗ್ಗೆ ಇಲಾಖೆ ಅಧಿಕಾರಿಗಳು ತಾವೇ ರೈತರ ಬಳಿಗೆ ಹೋಗಿ ಆಧುನಿಕ ತಂತ್ರಜ್ಞಾನ ವಿಧಾನಗಳು, ಯಾಂತ್ರಿಕರಣ ಇತ್ಯಾದಿ ಸುಧಾರಣೆಗಳ ಕುರಿತು ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಘೋಷವಾಖ್ಯದೊಂದಿಗೆ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಮುಂಗಾರು ಹಂಗಾಮಿನ ಪೂರ್ವದಲ್ಲಿ ಜೂ. 30ರೊಳಗೆ ಅನುಷ್ಠಾನಗೊಳಿಸಲು ಮುಂದಾಗಿದೆ.
ಕೃಷಿ ಇಲಾಖೆಯು ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ, ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆವಶ್ಯಕತೆಯಿರುವ ತಂತ್ರಜ್ಞಾನವನ್ನು ತಲುಪಿಸಲು, ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾದ ಕೃಷಿ ಅಭಿಯಾನದ ಮುಖಾಂತರ ತಲುಪಿಸುವ ಪ್ರಯತ್ನ ನಡೆಸಿದೆ.
ಕೃಷಿ ಅಭಿಯಾನದ ಸ್ವರೂಪ: ಸಮಗ್ರ ಕೃಷಿ ಮಾಹಿತಿ ಘಟಕ, ಕೃಷಿ ವಸ್ತು ಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ನಡೆಸುವುದು ಒಳಗೊಂಡಿದೆ. ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ 3ದಿನಗಳ ಕಾಲ ಹಮ್ಮಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ಚಿಕ್ಕಮಗಳೂರು., ಇವರನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದೆ.







