800 ಮೀ. ಓಟ: ಟಿಂಟೂ ಲುಕಾಗೆ ಬೆಳ್ಳಿ

ಹೊಸದಿಲ್ಲಿ, ಜೂ.7: ಈಗಾಗಲೇ ಒಲಿಂಪಿಕ್ ಗೇಮ್ಸ್‌ಗೆ ತೇರ್ಗಡೆಯಾಗಿರುವ ಭಾರತದ ಓಟಗಾರ್ತಿ ಟಿಂಟೂ ಲೂಕಾ ಝೆಕ್ ಗಣರಾಜ್ಯದ ಪರಾಗ್ವೆಯಲ್ಲಿ ನಡೆದ ಜೋಸೆಫ್ ಒಲೊಝಿಲ್ ಸ್ಮಾರಕ ಅಥ್ಲೆಟಿಕ್ಸ್ ಕೂಟದಲ್ಲಿ 800 ಮೀ. ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಸೋಮವಾರ ರಾತ್ರಿ ಝೆಕ್ ರಾಜಧಾನಿಯಲ್ಲಿ ನಡೆದ 800 ಮೀ. ಓಟದ ಸ್ಪರ್ಧೆಯಲ್ಲಿ 2:00.61 ನಿಮಿಷದಲ್ಲಿ ಗುರಿ ತಲುಪಿದ ಹಾಲಿ ಏಷ್ಯನ್ ಚಾಂಪಿಯನ್ ಟಿಂಟೂ ಬೆಳ್ಳಿ ಪದಕವನ್ನು ಗೆದ್ದುಕೊಂಡರು. 2013ರ ವಿಶ್ವ ಯೂತ್ ಚಾಂಪಿಯನ್‌ಶಿಪ್ ಚಾಂಪಿಯನ್ ಐಸ್‌ಲ್ಯಾಂಡ್‌ನ ಅನಿತಾ 2:00.54 ನಿಮಿಷದಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿದ್ದಾರೆ.
27ರ ಹರೆಯದ ಟಿಂಟೂ 2010ರಲ್ಲಿ 1:59.17 ಸೆಕೆಂಡ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಕಳೆದ ವರ್ಷ ಬೀಜಿಂಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಮೇ 29ರಂದು ಲಂಡನ್‌ನಲ್ಲಿ ನಡೆದ ಬ್ರಿಟಿಷ್ ಮಿಲರ್ಸ್ ಕ್ಲಬ್ ಗ್ರಾನ್‌ಪ್ರಿ 2016ರ ಟೂರ್ನಿಯಲ್ಲಿ 2:02.79 ನಿಮಿಷದಲ್ಲಿ ಗುರಿ ತಲುಪಿದ್ದ ಕೇರಳದ ಓಟಗಾರ್ತಿ ಟಿಂಟೂ ನಾಲ್ಕನೆ ಸ್ಥಾನ ಪಡೆದಿದ್ದರು.





