ಪ್ರವಾಸೋದ್ಯಮ ಇಲಾಖೆ ನೀಡಿದ ಟಾಕ್ಸಿ ಸಾಲ ಮನ್ನಾಕ್ಕೆ ಒತ್ತಾಯ

ಚಿಕ್ಕಮಗಳೂರು, ಜೂ.7: ಟ್ಯಾಕ್ಸಿಗಳ ಮೇಲಿರುವ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಪ್ರವಾಸೋದ್ಯಮ ಇಲಾಖೆ ಟ್ಯಾಕ್ಸಿ ಮಾಲಕರ ಸಂಘದ ಮಾಲಕರು ಮತ್ತು ಚಾಲಕರು ಅಪರ ಜಿಲ್ಲಾಧಿಕಾರಿ ವೈಶಾಲಿ ಮೂಲಕ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸುಮಾರು 4ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದೆಲ್ಲೆಡೆ ಸಾವಿರಾರು ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ(ಕಾರು)ಗಳನ್ನು ನೀಡಿರುವುದು ಸ್ವಾಗತಾರ್ಹ. ಆದರೆ ಸರಕಾರದಿಂದ ನೀಡಿದ ಕಾರುಗಳಿಗೆ ಸರಕಾರಿ ಕಚೇರಿಗಳಿಂದ ಯಾವುದೇ ಬಾಡಿಗೆಗಳನ್ನು ನೀಡುತ್ತಿಲ್ಲ. ಬದಲಾಗಿ ಎಲ್ಲ ಇಲಾಖೆಯಲ್ಲಿ ಖಾಸಗಿ ಎಂಜೆನ್ಸಿಗಳ ಹಳದಿ ಮತ್ತು ಬಿಳಿಯ ಬೋರ್ಡಿನ ಕಾರುಗಳನ್ನು ಪಡೆಯುಲಾಗುತ್ತಿದೆ ಎಂದು ಆರೋಪಿಸಿದರು.
ಇದರಿಂದ ಪ್ರವಾಸ್ಯೋದ್ಯಮ ಕಾರುಗಳು ಬಾಡಿಗೆಯಿಲ್ಲದೆ, ವರ್ಷಗಟ್ಟಲೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಬಿಳಿಯ ಬೋರ್ಡಿನ ಕಾರುಗಳು ನಿರ್ಭಯವಾಗಿ ಆರ್‌ಡಿಒ ನಿಯಮಗಳನ್ನು ಮೀರಿ ಅತಿ ಕಡಿಮೆ ಬೆಲೆಗೆ ಬಾಡಿಗೆ ನಡೆಸುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳಿಂದ ಸಾವಿರಾರು ಪ್ರವಾಸೋದ್ಯಮ ಇಲಾಖೆಯ ಫಲಾನುಭವಿಗಳು ಬಾಡಿಗೆಯಿಲ್ಲದೆ ಸಾಲಗಾರರಾಗಿ ಬ್ಯಾಂಕ್‌ಗಳು ನೀಡಿರುವ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಆದ್ದರಿಂದ ಎಲ್ಲ ಸರಕಾರಿ ಕಚೇರಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಹಳದಿ ಬೋರ್ಡಿನ ವಾಹನಗಳನ್ನು ನಿಖರವಾದ ಬೆಲೆಗೆ ಬಾಡಿಗೆ ಪಡೆಯಲು ಪ್ರಾಶಸ್ತ್ಯ ನೀಡಬೇಕು. ಇಲ್ಲದಿದ್ದರೆ ಟ್ಯಾಕ್ಸಿ ಪಡೆದಿರುವ ಫಲಾನುಭವಿಗಳು ಅತಂತ್ರ ಸ್ಥಿತಿಗೆ ತಲುಪಬೇಕಾಗುತ್ತದೆ. ಈ ಕೂಡಲೇ ಸರಕಾರ ಪ್ರವಾಸೋದ್ಯಮ ಟ್ಯಾಕ್ಸಿ ಫಲಾನುಭವಿಗಳ ಸಾಲವನ್ನು ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದಂಟರಮಕ್ಕಿ ಶ್ರೀನಿವಾಸ್, ವಿರುಪಾಕ್ಷ, ಹರೀಶ್, ಮೋಹನ್ ಕುಮಾರ್, ವಿಜಯಕುಮಾರ್, ದೇವರಾಜು ಜಯಣ್ಣ, ಸುನೀಲ್ ಆರ್, ಪ್ರವೀಣ್ ಎಚ್.ಕೆ., ದರ್ಶನ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.







