ವಿಕಲಾಂಗರಿಗೆ ದೇಶಾದ್ಯಂತ ಏಕರೀತಿಯ ಗುರುತಿನ ಚೀಟಿ: ಸಚಿವ ಥಾವರ್‌ಚಂದ್ ಗೆಹ್ಲೋಟ್
ವಿಕಲಚೇತನರಿಗೆ ಉಚಿತ ಸಾಧನ-ಸಲಕರಣೆ ವಿತರಣೆ
ಶಿವಮೊಗ್ಗ, ಜೂ. 7: ದೇಶದಾದ್ಯಂತ ಇರುವ ಎಲ್ಲ ಅಂಗವಿಕಲರನ್ನು ಸರ್ವೇ ಮೂಲಕ ಗುರುತಿಸಿ, ಮುಂದಿನ 1-2 ವರ್ಷಗಳಲ್ಲಿ ಏಕರೀತಿಯ ಗುರುತಿನ ಚೀಟಿ ನೀಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರು ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಹಾಗೂ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಸರಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ವಿಕಲಚೇತನರಿಗಾಗಿ ಉಚಿತ ಸಾಧನ-ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಈ ಗುರುತಿನ ಚೀಟಿ ಪಡೆಯುವುದರಿಂದಾಗಿ ದೇಶದ ಯಾವುದೇ ಭಾಗದಲ್ಲಿ ವಿಕಲಾಂಗರು ಸರಕಾರದ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಅಂಗವಿಕಲ ಯುವ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದೇಶದ ಆಯ್ದ ಸ್ಥಳಗಳನ್ನು ಗುರುತಿಸಿ ಸುವ್ಯವಸ್ಥಿತ ಕ್ರೀಡಾಂಗಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ ಎಂದವರು ನುಡಿದರು.
ದಿವ್ಯಾಂಗರ ದೈಹಿಕ, ಬೌದ್ಧಿಕ, ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ವಿಕಾಸಕ್ಕಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾ ಗುತ್ತಿದೆ. 2014ನೆ ಸಾಲಿನಿಂದ ಎಲ್ಲ ಹಂತದ ವಿಕಲಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ, ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಲು ವಿದ್ಯಾರ್ಥಿವೇತನ ಹಾಗೂ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದರು.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಶೇಷ ಅಗತ್ಯವುಳ್ಳ ವಿಕಲಾಂಗರನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಚಿಕಿತ್ಸೆ ಹಾಗೂ ಸಾಧನ-ಸಲಕರಣೆಗಳನ್ನು ನೀಡಲಾಗುವುದು. ಅದಕ್ಕಾಗಿ ತಲಾ 6 ಲಕ್ಷ ರೂ. ನೀಡಲಾಗುವುದು. ಈವರೆಗೆ ಸುಮಾರು 352 ಮಕ್ಕಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದರು. ವಿಕಲಾಂಗರಿಗಾಗಿ ಈ ಹಿಂದೆ ಜಾರಿಗೊಳಿಸಲಾದ ಯೋಜನೆಯಡಿಯಲ್ಲಿ ಕೇವಲ 7-8 ರೀತಿಯ ವಿಕಲಾಂಗರನ್ನು ಗುರುತಿಸಲಾಗಿದೆ. ಈ ಯೋಜ ನೆಯಡಿಯಲ್ಲಿ ಅನೇಕ ಬದಲಾವಣೆಗಳನ್ನು ತಂದು ಹೊಸ ಸುಧಾರಿತ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಹೊಸ ಯೋಜನೆಯಡಿಯಲ್ಲಿ ಸುಮಾರು 19 ರೀತಿಯಲ್ಲಿ ವಿಕಲಾಂಗರನ್ನು ಗುರುತಿಸಲಾಗುವುದು ಎಂದವರು ನುಡಿದರು.
ಅಂಧರು ಸುಲಭ-ಸರಳವಾಗಿ ಓಡಾಡಲು ಅನುಕೂಲ ವಾಗುವಂತೆ ಆಧುನಿಕ ಯಂತ್ರ ಅಳವಡಿಸಿರುವ ವಾಕಿಂಗ್‌ಸ್ಟಿಕ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಈ ಸ್ಟಿಕ್‌ಗೆ ಸಂದೇಶ ರವಾನಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಈ ಸ್ಟಿಕ್‌ನ ಸಹಾಯದಿಂದ ಅಂಧರು ಯಾರ ಸಹಾಯವಿಲ್ಲದೆ ಓಡಾಡಬಹುದಾಗಿದೆ ಎಂದರು.
ಈಗಾಗಲೇ ಅಂಧ ವಿದ್ಯಾರ್ಥಿ ಗಳಿಗೆ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಿವಿಧ ಯೋಜನೆಯಡಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಠ್ಯವಿಷಯದ ಧ್ವನಿಮುದ್ರಿತ ಸಲಕರಣೆಗಳನ್ನು ವಿತರಿಸಲಾಗುವುದು. ಇದರಿಂದಾಗಿ ಅಂಧ ವಿದ್ಯಾರ್ಥಿಗಳು ಸರಳವಾಗಿ ಪರೀಕ್ಷೆ ಎದುರಿಸಬಹುದಾಗಿದೆ ಎಂದರು.
ಇದಲ್ಲದೇ ವಿದ್ಯುತ್ ಚಾರ್ಜ್ ಮಾಡಿ ಓಡಿಸ ಬಹುದಾದ ಮೋಟಾರ್ ಸೈಕಲ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿ 500ಕ್ಕೂ ಹೆಚ್ಚಿನ ಮಹಾನಗರ-ಪಟ್ಟಣಗಳಲ್ಲಿ ಅಂಗವಿಕಲರ ಸೌಲಭ್ಯಗಳಿಗಾಗಿ ವ್ಯವಸ್ಥಿತ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದರು. ಇಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಲಿಂಕೋ ಸಂಸ್ಥೆಯ ವತಿಯಿಂದ 140 ಫಲಾನುಭವಿಗಳಿಗೆ 204 ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 12 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ವಿಕಲಾಂಗರಿಗೆ ಅನುಕೂಲವಾಗುವಂತೆ ಸಾಧನ-ಸಲಕರಣೆ ಹಾಗೂ ಅವರ ಶ್ರೇಯೋಭಿವೃದ್ಧಿಯ ಕಾರ್ಯಕ್ರಮಗಳಿಗಾಗಿ ರೂ.5 ಲಕ್ಷಗಳನ್ನು ಸಂಸದರ ನಿಧಿಯಿಂದ ಬಿಡುಗಡೆ ಮಾಡಲಾಗುವುದು. ಅಂಗವಿಕಲರಿಗೆ ಎಲ್ಲ ರೀತಿಯ ಆರ್ಥಿಕ, ಶೈಕ್ಷಣಿಕ ನೆರವು ನೀಡಿ ಅವರ ಜೀವನ ಗುಣಮಟ್ಟ ಸುಧಾರಿಸುವ ಕೆಲಸ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಮುಂತಾದವರು ಉಪಸ್ಥಿತರಿರದ್ದರು.







