ಮನೆಯೊಳಗೆ ಅವಿತಿದ್ದ ಬೃಹದಾಕಾರದ ಕಾಳಿಂಗ ಸರ್ಪ ಸೆರೆ!

ಶಿವಮೊಗ್ಗ, ಜೂ. 7: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ಮೇಲಿನ ಪಟರವಳ್ಳಿ ಗ್ರಾಮದ ಮನೆಯ ಒಳಭಾಗದಲ್ಲಿ ಕಾಣಿಸಿಕೊಂಡಿದ್ದ ಬೃಹದಾಕಾರದ ಕಾಳಿಂಗ ಸರ್ಪವನ್ನು ಖ್ಯಾತ ಉರಗ ತಜ್ಞ ಸ್ನೇಕ್ ಕಿರಣ್ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಪೂಜಾ ಎಂಬವರ ಅಡುಗೆ ಮನೆಯ ಮೇಲ್ಛಾವಣಿಯಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಮೊಬೈಲ್ ಮೂಲಕ ಸ್ನೇಕ್ ಕಿರಣ್‌ರವರಿಗೆ ಮಾಹಿತಿ ರವಾನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಕಿರಣ್‌ರವರು, ಸರಿಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಅವಿರತ ಕಾರ್ಯಾಚರಣೆ ನಡೆಸಿ ಮನೆಯ ಮೇಲ್ಛಾವಣಿಯಲ್ಲಿದ್ದ ಕಾಳಿಂಗ ಸರ್ಪ ಹಿಡಿಯುವಲ್ಲಿ ಯಶಸ್ವಿಯಾದರು.
ಮನೆಯಲ್ಲಿ ಕಾಳಿಂಗ ಸರ್ಪವಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಪೂಜಾರವರ ಮನೆಯ ಬಳಿ ನೆರೆದಿದ್ದರು. ಸ್ನೇಕ್ ಕಿರಣ್ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂದಿತು.ಕಾರ್ಯಾಚರಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಕ್ ಕಿರಣ್, ಕಾಳಿಂಗ ಸರ್ಪವು ಸುಮಾರು 13 ಅಡಿ ಉದ್ದವಿದ್ದು, 3 ಇಂಚು ದಪ್ಪವಿದೆ. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಂಡಗದ್ದೆ ಸಮೀಪದ ಅರಣ್ಯದಲ್ಲಿ ಬಿಡಲಾಗುವುದು ಎಂದರು.







