ಚುನಾವಣಾ ಆಯೋಗದ ನಿರ್ಧಾರಕ್ಕೆ ಬದ್ಧ: ಆಸ್ಕರ್

ಬೆಂಗಳೂರು, ಜೂ.7: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆಸ್ಕರ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಚುನಾವಣೆ ಮುಂದೂಡಿಕೆಯಾಗುವುದಿಲ್ಲ. ಆದರೂ, ಚುನಾವಣೆ ಮುಂದೂಡುವುದು ಅಥವಾ ನಿಗದಿಯಂತೆ ನಡೆಸುವ ಸಂಬಂಧ ಚುನಾವಣಾ ಆಯೋಗ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿಗಳು ನಡೆಸಿರುವಂತಹ ರಹಸ್ಯ ಕಾರ್ಯಾಚರಣೆಗಳು, ಶಾಸಕರ ರೆಸಾರ್ಟ್ ರಾಜಕಾರಣದ ಬಗ್ಗೆ ಒಬ್ಬ ಅಭ್ಯರ್ಥಿಯಾಗಿ ಈ ಹಂತದಲ್ಲಿ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ. ಆದುದರಿಂದ, ಈ ಸಂಬಂಧ ಯಾವುದೇ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಸ್ಪೀಕರ್ ಜೊತೆ ಇದೊಂದು ಸೌಹಾರ್ದಯುತವಾದ ಭೇಟಿಯಾಗಿತ್ತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಸಭೆಯ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್, ಸಚಿವ ವಿನಯಕುಮಾರ್
ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







