ಇರಾ: ವಿಶ್ವ ಪರಿಸರ ದಿನಾಚರಣೆ

ಕೊಣಾಜೆ, ಜೂ.8:ಬಂಟ್ವಾಳ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಇರಾ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಇರಾ ತಾಳಿತ್ತಬೆಟ್ಟುವಿನ ದ.ಕ.ಜಿಲ್ಲಾ ಪಂಚಾಯತ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವ ಜಲ ಮರುಪೂರಣ ಅಭಿಯಾನ ಹಾಗೂ ವಿಶ್ವಪರಿಸರ ದಿನಾಚರಣೆ ಬುಧವಾರ ನಡೆಯಿತು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ ಗಿಡ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪರಿಸರದ ರಕ್ಷಣೆಯ ಮಹತ್ವನ್ನು ನಾವು ವಿದ್ಯಾರ್ಥಿ ದೆಸೆಯಲ್ಲೇ ಅರಿತುಕೊಂಡು ಸಮಾಜಕ್ಕೆ ಈ ಬಗ್ಗೆ ಜಾಗೃತಿ ಹುಟ್ಟಿಸುವ ಕೆಲಸ ಆಗಬೇಕಿದೆ. ಅಲ್ಲದೆ ಜಲ ಮರುಪೂರಣದಂತಹ ಯೋಜನೆಯಿಂದ ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯ ಎಂದು ಹೇಳಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುರಳೀಧರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಂಯೋಜಕ ಪ್ರಕಾಶ್ ಶೆಟ್ಟಿ ಮರುಪೂರಣ ಅಭಿಯಾನದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಗ್ರಾಮ ಪಂಚಾಯತ್ ಸದಸ್ಯ ಮೊಯ್ದೀನ್ ಕುಂಞಿ ಜಲ ಮರುಪೂರಣ ಘಟಕವನ್ನು ಶೀಘ್ರವಾಗಿ ನಿರ್ಮಿಸುವ ಬಗ್ಗೆ ಭರವಸೆ ನೀಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವಿಕಲಾ, ಗಣೇಶ್, ಸಹ ಶಿಕ್ಷಕ ಜಾನ್ ಫೆರ್ನಾಂಡಿಸ್, ಶಿಕ್ಷಕರಾದ ಶಶಿ ಬಿ, ಮಿನೋರಾ ರೋಸಿ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್.ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶಶಿ ಬಿ. ವಂದಿಸಿದರು.







