ಬಾಲ್ಯ ವಿವಾಹ ಕಾಯ್ದೆ ತಿದ್ದುಪಡಿಗೆ ಶೀಘ್ರ ಅನುಮೋದನೆ ನೀಡಲು ಒತ್ತಾಯ

ಬೆಂಗಳೂರು.ಜೂ.8:ಬಾಲ್ಯ ವಿವಾಹ ಕಾಯ್ದೆಗೆ ರಾಜ್ಯ ಸರ್ಕಾರ ಮಾಡಿರುವ ತಿದ್ದುಪಡಿಯನ್ನು ರಾಜ್ಯಪಾಲರು ಅನಗತ್ಯವಾಗಿ ವಿಳಂಬ ಮಾಡದೇ ಶೀಘ್ರ ಅನುಮೋದನೆ ನೀಡಬೇಕೆಂದು ಎಂದು ಕರ್ನಾಟಕ ಬಾಲ್ಯವಿವಾಹ ನಿಷೇಧ ಕಾರ್ಯಪಡೆ ಒತ್ತಾಯಿಸಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಪಡೆಯ ವಿ.ಗೋಪಾಲ್, ಆಡಿಸ್ ಆರ್ನಾಲ್ಡ್, ಮನೋಹರ್, ನಾಗರಾಜ್ ಎಂ. ಕಾತ್ಯಾಯನಿ ಚಾಮರಾಜ್ ಅವರು, ಕಾಯ್ದೆ ತಿದ್ದುಪಡಿಯಲ್ಲಿ ಬಾಲ್ಯ ವಿವಾಹಗಳನ್ನು ನಡೆಸಲು ಉತ್ತೇಜಿಸುವವರಿಗೆ ಒಂದು ವರ್ಷದಿಂದ ಎರಡು ವರ್ಷದ ತನಕ ಕಠಿಣ ಶಿಕ್ಷೆ ವಿಧಿಸುತ್ತದೆ. ಬಾಲ್ಯವಿವಾಹಗಳನ್ನು ಅಪರಾಧಿ ಪ್ರಕರಣಗಳೆಂದು ಪರಿಗಣಿಸಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗುತ್ತಿದೆ. ಬಾಲ್ಯ ವಿವಾಹಗಳನ್ನು ರದ್ದುಪಡಿಸುವ ಅಧಿಕಾರವನ್ನೂ ಈ ತಿದ್ದುಪಡಿ ಸೂಚಿಸಿದೆ. ಅತ್ಯಂತ ಪ್ರಗತಿದಾಯಕವಾದ ಈ ತಿದ್ದುಪಡಿಯನ್ನು ರಾಜ್ಯಪಾಲರು ಅನುಮೋದಿಸದೆ ವಿಳಂಬ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಬಾಲ್ಯವಿವಾಹಗಳನ್ನು ನಡೆಸುತ್ತಿರುವುದರಲ್ಲಿ ದೇಶ 11 ನೇ ಸ್ಥಾನದಲ್ಲಿದೆ. ಕರ್ನಾಟಕ 4 ನೇ ಸ್ಥಾನದಲ್ಲಿದ್ದು, ಹೆಣ್ಣು ಮಕ್ಕಳ ಸಶಕ್ತೀಕರಣ ಬಾಲ್ಯವಿವಾಹ ನಿಷೇಧದಿಂದ ಮಾತ್ರ ಸಾಧ್ಯ. ಇದಕ್ಕೆ ಹೀಗಿರುವ ಕಾನೂನು ಪ್ರಬಲವಾಗಿಲ್ಲದ ಕಾರಣ ಕಟ್ಟು ನಿಟ್ಟಾದ ಕಾನೂನಿನ ಅಗತ್ಯವಿದ್ದು, ಪ್ರಸ್ತುತ ರಾಜ್ಯ ಸರ್ಕಾರ ತರುತ್ತಿರುವ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ಅಂಶಗಳು ಇರುವುದರಿಂದ ಈ ಕಾಯ್ದೆಯನ್ನು ರಾಜ್ಯಪಾಲರು ತ್ವರಿತಗತಿಯಲ್ಲಿ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಲವೆಡೆ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಬೆಂಬಲ ಬಾಲ್ಯವಿವಾಹಗಳು ಸಾಮಾನ್ಯವಾಗಿಬಿಟ್ಟಿವೆ. ಬಾಲ್ಯ ವಿವಾಹಗಳನ್ನು ನಡೆಸುವವರಿಗೆ ಕಳೆದ 10 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಶಿಕ್ಷೆಯಾಗಿಲ್ಲ. ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಈಗಿನ ಕಾನೂನು ನೆರವಾಗುವುದಿಲ್ಲ. ಹೀಗಾಗಿಯೇ ತಿದ್ದುಪಡಿಗೆ ಶೀಘ್ರ ಅನುಮೋದನೆ ನೀಡಿದರೆ ಮಕ್ಕಳ ಹಕ್ಕು ಉಲ್ಲಂಘನೆ ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.







