ಜೂ.21: ಎಸ್‌ಡಿಎಂನಲ್ಲಿ 1,000 ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ

ಬೆಳ್ತಂಗಡಿ, ಜೂ.8; ವಿಶ್ವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಜೂ.21ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 7 ಗಂಟೆಗೆ ಒಂದು ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಚರಣೆಯ ಪೂರ್ವ ಭಾವಿಯಾಗಿ ರಾಷ್ಟ್ರೀಯ ಸೇವಾ ಯೋಜನೆಯ ಆಯ್ದ ಪ್ರತಿನಿಧಿಗಳಿಗೆ ಹಾಗೂ ಯೋಜನಾಧಿಕಾರಿಗಳಿಗೆ ರಾಜೀವ ಗಾಂಧಿ ವಿವಿ ಸಂಯೋಜನೆಯಲ್ಲಿ 3ದಿನಗಳ ಯೋಗ ಮತ್ತು ಜೀವನ ಶೈಲಿಯ ಕಾರ್ಯಾಗಾರ ನಡೆಯಲಿದೆ. ಇದನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೂಗಲ್ ಭಾರತದ ಅಧ್ಯಕ್ಷ ಚೇತನ್ ಕೃಷ್ಣ, ರಾಜ್ಯದ ಸಚಿವ ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ.ಕರ್ನಾಟಕದ ಎಲ್ಲಾ ವಿ.ವಿ.ಗಳ ಎನ್ನೆಸ್ಸೆಸ್ ಪ್ರತಿನಿಧಿಗಳು ತಲಾ 20 ವಿದ್ಯಾರ್ಥಿಗಳಂತೆ ಹಾಗು ರಾಜೀವ ಗಾಂಧಿ ವಿವಿಯ 100 ಎನ್ನೆಸ್ಸೆಸ್ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು, ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಮಹಾವಿದ್ಯಾಲಯದ 300 ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯೋಗ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಭಾರತ ಸರಕಾರದ ಆಯುಷ್ ಮಂತ್ರಾಲಯದ ಸಹಯೋಗದಲ್ಲಿ ಅದರ ನಿರ್ದೇಶನದಂತೆ ರಾಜ್ಯದ ರಾಮನಗರ ಜಿಲ್ಲೆಯಲ್ಲಿ 200, ಚಾಮರಾಜನಗರ ಜಿಲ್ಲೆಯಲ್ಲಿ 1,220, ಮಂಡ್ಯ ಜಿಲ್ಲೆಯಲ್ಲಿ 175 ಹಾಗೂ ಕೊಡಗು ಜಿಲ್ಲೆಯಲ್ಲಿ 655 ಶಿಬಿರಾರ್ಥಿಗಳಿಗೆ ಒಂದು ತಿಂಗಳ ಯೋಗದ ಉಚಿತ ಶಿಬಿರ ನಡೆಯುತ್ತಿದೆ. ಆಯಾ ಜಿಲ್ಲೆಗಳಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಶಾಂತಿ, ಸಹಬಾಳ್ವೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಕೇಂದ್ರ ಸರಕಾರದ ಯುವಜನ ಸೇವೆಗಳ ಮಂತ್ರಾಲಯ ಪ್ರಾಯೋಜಿತ, ರಾಜ್ಯದ ವಿವಿಗಳ ಸಹಭಾಗಿತ್ವದಲ್ಲಿ ಜೂ.19 ರಿಂದ 21 ರವರೆಗೆ ರಾಜ್ಯದ 20 ವಿವಿಗಳ ರಾ.ಸೇ.ಯೋ. ಆಯ್ದ 500 ಪ್ರತಿನಿಧಿಗಳಿಗೆ ಹಾಗೂ ಯೋಜನಾಧಿಕಾರಿಗಳಿಗೆ ತರಬೇತಿ ಶಿಬಿರ, ಯೋಗ ದಿನಾಚರಣೆ ನಡೆಯಲಿದೆ. ಕಾಲೇಜಿನ 30 ರಾಜ್ಯ ಹಾಗೂ ನೇಪಾಳದಿಂದ ಬಂದ ವಿದ್ಯಾರ್ಥಿಗಳು ಅವರವರ ಪ್ರಾಂತ್ಯದಲ್ಲಿ ಕನಿಷ್ಠ 50 ಜನರಿಗೆ 300 ಕೇಂದ್ರಗಳಲ್ಲಿ 10 ದಿನಗಳ ಯೋಗ ತರಬೇತಿಗೆ ಸಿದ್ಧತೆ ನಡೆದಿದೆ. ಇದಕ್ಕೆ ವಿದ್ಯಾರ್ಥಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಡಾ. ಪ್ರಶಾಂತ ಶೆಟ್ಟಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಜೀವಂಧರ ಕುಮಾರ್, ಕಾಲೇಜಿನ ಯೋಗ ವಿಭಾಗದ ಡೀನ್‌ಗಳಾದ ಡಾ.ಶಿವಪ್ರಸಾದ ಶೆಟ್ಟಿ ಹಾಗೂ ಡಾ. ಸುಜಾತಾ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಶಶಿಕಾಂತ ಜೈನ್ ಇದ್ದರು.







