ಮುಹಮ್ಮದ್ ಅಲಿ ಅಂತ್ಯಕ್ರಿಯೆಗೆ ಒಬಾಮ ಗೈರು

ವಾಶಿಂಗ್ಟನ್, ಜೂ. 8: ಶುಕ್ರವಾರ ನಡೆಯಲಿರುವ ಬಾಕ್ಸರ್ ಮುಹಮ್ಮದ್ ಅಲಿಯ ಅಂತ್ಯಕ್ರಿಯೆಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸುವುದಿಲ್ಲ. ಅದೇ ದಿನ ನಡೆಯಲಿರುವ ತನ್ನ ಮಗಳ ಹೈಸ್ಕೂಲ್ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಕೆಂಟಕಿಯ ಲೂಯಿಸ್‌ವಿಲ್‌ನಲ್ಲಿ ನಡೆಯಲಿರುವ ಮೆರವಣಿಗೆ ಮತ್ತು ಅಂತ್ಯಕ್ರಿಯೆಯಲ್ಲಿ ವಿಶ್ವ ನಾಯಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಇದೇ ಊರಿನಲ್ಲಿ ಅಲಿ 1942ರಲ್ಲಿ ಹುಟ್ಟಿದ್ದರು.
ಒಬಾಮ ಮತ್ತು ಅವರ ಪತ್ನಿ ಮಿಶೆಲ್ ವಾಶಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ತಮ್ಮ ಮಗಳು ಮಲಿಯಾಳ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತ ಭವನ ಪ್ರಕಟಿಸಿದೆ.
ಶ್ವೇತಭವನದ ಹಿರಿಯ ಸಲಹಾಗಾರ ಹಾಗೂ ಅಲಿಯ ವೈಯಕ್ತಿಕ ಪರಿಚಯವಿರುವ ವಲೇರಿ ಜ್ಯಾರೆಟ್‌ರನ್ನು ಒಬಾಮ ದಂಪತಿ ಪತ್ರದೊಂದಿಗೆ ಅಲಿ ಅಂತ್ಯಕ್ರಿಯೆಗೆ ಕಳುಹಿಸಿಕೊಡಲಿದ್ದಾರೆ.
Next Story





