ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಭಾರತ-ಅಮೆರಿಕ ನಿರ್ಧಾರ

ವಾಷಿಂಗ್ಟನ್,ಜೂ.8: ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧವನ್ನು ಇನ್ನಷ್ಟು ವಿಸ್ತರಿಸಲು ಮತ್ತು ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಹೊಸ ಅವಕಾಶಗಳನ್ನು ಅನ್ವೇಷಿಸಲು ಭಾರತ ಮತ್ತು ಅಮೆರಿಕ ಬುಧವಾರ ಪಣ ತೊಟ್ಟವು.
ಅಮೆರಿಕ-ಭಾರತ ನಡುವೆ ಟೋಟಲೈಜೇಷನ್ ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಹೊಸತನ ಹಾಗೂ ರಚನಾತ್ಮಕತೆಯನ್ನು ಉತ್ತೇಜಿಸಲು ಬೌದ್ಧಿಕ ಆಸ್ತಿಗಳ ಹಕ್ಕುಗಳ ಕುರಿತಂತೆ ಮಾತುಕತೆಗಳನ್ನು ಹೆಚ್ಚಿಸಲು ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದರು.
ದ್ವಿಪಕ್ಷೀಯ ವ್ಯಾಪಾರವನ್ನು ಸಾಕಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸರಕುಗಳು ಮತ್ತು ಸೇವೆಗಳ ಪೂರೈಕೆಗೆ ಅಡೆತಡೆಗಳನ್ನು ನಿವಾರಿಸಲು ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಮತ್ತು ಜಾಗತಿಕ ಪೂರೈಕೆ ಸರಣಿಗಳಲ್ಲಿ ಆಳವಾಗಿ ಪಾಲ್ಗೊಳ್ಳುವಿಕೆಯನ್ನು ಬೆಂಬಲಿಸುವ ಮೂಲಕ ಉಭಯ ದೇಶಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಸಮೃದ್ಧಿಗಾಗಿ ಉಭಯ ನಾಯಕರು ಪಣ ತೊಟ್ಟಿದ್ದಾರೆ ಎಂದು ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬರಾಕ್ ಒಬಾಮಾ ಅವರ ನಡುವೆ ಮಾತುಕತೆಗಳ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯು ತಿಳಿಸಿದೆ.
ಈ ಸಂಬಂಧ ದೃಢವಾದ ಕ್ರಮಗಳನ್ನು ಗುರುತಿಸಲು ಈ ವರ್ಷದ ಉತ್ತರಾರ್ಧದಲ್ಲಿ ಭಾರತದಲ್ಲಿ ನಡೆಯಲಿರುವ ವಾರ್ಷಿಕ ವ್ಯೆಹಾತ್ಮಕ ಮತ್ತು ವಾಣಿಜ್ಯ ಮಾತುಕತೆಗಳನ್ನು ಉಭಯ ನಾಯಕರು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.
ಅಮೆರಿಕ ಮತ್ತು ಭಾರತಗಳ ನಡುವಿನ ಸದೃಢ ಮತ್ತು ಹೆಚ್ಚುತ್ತಿರುವ ಆರ್ಥಿಕ ಸಂಬಂಧಗಳನ್ನು ಪ್ರಮುಖವಾಗಿ ಬಿಂಬಿಸಿದ ನಾಯಕರು ಸುಸ್ಥಿರ,ಎಲ್ಲರನ್ನೂ ಸೇರ್ಪಡೆಗೊಂಡ ಮತ್ತು ಪ್ರಬಲ ಆರ್ಥಿಕ ಬೆಳವಣಿಗೆಗೆ ಹಾಗೂ ಗ್ರಾಹಕ ಬೇಡಿಕೆೆ ,ಉದ್ಯೋಗ ಸೃಷ್ಟಿ,ಕೌಶಲ್ಯಾಭಿವೃದ್ಧಿ ಇತ್ಯಾದಿಗಳಿಗೆ ಉತ್ತೇಜನ ನೀಡಲು ಸಮಾನ ಪ್ರಯತ್ನಗಳಿಗೆ ಬದ್ಧತೆಯನ್ನು ವ್ಯಕ್ತಪಡಿಸಿದರು.
ಅಮೆರಿಕ-ಭಾರತ ನಡುವಿನ ಟೋಟಲೈಝೇಷನ್ ಒಪ್ಪಂದ ಕುರಿತಂತೆ ಮಾತುಕತೆಯನ್ನು ಮುಂದುವರಿಸಲೂ ಉಭಯ ನಾಯಕರು ನಿರ್ಧರಿಸಿದರು.
ಸಾಮಾಜಿಕ ಭದ್ರತಾ ತೆರಿಗೆಗಳಿಗೆ ಸಂಬಂಧಿಸಿದಂತೆ ಆದಾಯದ ಮೇಲೆ ಇಮ್ಮಡಿ ತೆರಿಗೆಯನ್ನು ನಿವಾರಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಈ ಒಪ್ಪಂದದಡಿ ಉಭಯ ರಾಷ್ಟ್ರಗಳ ವೃತ್ತಿಪರರು ಅಲ್ಪಾವಧಿಯ ಕೆಲಸದ ಮೇಲೆ ಪರಸ್ಪರರ ರಾಷ್ಟ್ರಗಳಿಗೆ ತೆರಳಿದಾಗ ಸಾಮಾಜಿಕ ಭದ್ರತಾ ತೆರಿಗೆಗಳಿಂದ ವಿನಾಯಿತಿ ಪಡೆಯಲಿದ್ದಾರೆ.







