ಶ್ಯಾಮ್‌ಭಟ್ ಹೆಸರು ತಿರಸ್ಕರಿಸಲು ದೊರೆಸ್ವಾಮಿ ಒತ್ತಾಯ
ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆ
ಬೆಂಗಳೂರು, ಜೂ.8: ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಶ್ಯಾಮ್‌ಭಟ್ ರನ್ನು ನೇಮಕ ಮಾಡುವಂತೆ ಸರಕಾರ ಮಾಡಿರುವ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಬೇಕು ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕಪಿಲ್ ಮೋಹನ್‌ರನ್ನು ಹುದ್ದೆಯಿಂದ ತೆರವು ಮಾಡಬೇಕು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಒತ್ತಾಯಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶವಂತಪುರದಲ್ಲಿರುವ ಕಪಿಲ್ ಮೋಹನ್‌ಗೆ ಸೇರಿದ ಗೋಲ್ಡನ್‌ಗೇಟ್ ಅಪಾರ್ಟ್‌ಮೆಂಟ್ ಮೇಲೆ ಸಿಐಡಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೋಹನ್ ಪತ್ನಿ ರುಚಿ ಸಕ್ಸೇನಾ, ತಂದೆ ಮತ್ತು ಸೋದರನ ಹೆಸರಿನಲ್ಲಿ ನೂರಾರು ಕೋಟಿ ರೂ. ವೌಲ್ಯದ ಅಕ್ರಮ ಆಸ್ತಿ ದಾಖಲೆಗಳು, 500 ಕೋಟಿ ನಗದು , 4 ಕೆಜಿ ಚಿನ್ನ, ವಜ್ರಗಳು ಜಪ್ತಿ ಮಾಡಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು, ಭ್ರಷ್ಟರನ್ನು ಹುಡುಕಿ ತಂದು ಸರಕಾರದ ಇಲಾಖೆಗಳಿಗೆ ನೇಮಕ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿಗಳ ಇಂತಹ ನಡೆಯಿಂದಾಗಿ ನನಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಕೆ.ಎಚ್.ರಾಮಲಿಂಗಾರೆಡ್ಡಿ ಮಾತನಾಡಿ, ಬಿಡಿಎ ಆಯುಕ್ತರಾಗಿರುವ ಶ್ಯಾಮ್‌ಭಟ್ ವಿರುದ್ಧ ಲೋಕಾಯುಕ್ತದಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಖಾಸಗಿ ಸಂಸ್ಥೆಗಳಿಗೆ ನೂರಾರು ಎಕರೆಯನ್ನು ಡಿನೋಟಿಫಿಕೇಷನ್ ಮಾಡಿಕೊಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಂಪಣ್ಣ ಆಯೋಗಕ್ಕೆ ಸಲ್ಲಿಸಿರುವ ದೂರುಗಳಲ್ಲಿ ಗಂಭೀರ ಆರೋಪಗಳಿವೆ. ಮಾನ್ಯತಾ ಟೆಕ್ ಪಾರ್ಕ್‌ಗೆ ನಗರಾಭಿವೃದ್ಧಿ ಇಲಾಖೆ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಹೆಚ್ಚುವರಿ ಭೂಮಿಯನ್ನು ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಐದು ಮೂಲ ಕಡತಗಳು ನಾಪತ್ತೆಯಾಗಿರುವುದರ ಹಿಂದೆ ಶ್ಯಾಮ್‌ಭಟ್ ಕೈವಾಡ ಇರುವುದು ಸೇರಿದಂತ ಹಲವಾರು ಪ್ರಕರಣಗಳ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಹೀಗಾಗಿ ಶ್ಯಾಮ್‌ಭಟ್ ಹೆಸರನ್ನು ತಿರಸ್ಕರಿಸಬೇಕು ಎಂದು ಹೇಳಿದರು.
ಈ ಹಿಂದೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್ ಹೆಸರನ್ನು ಶಿಫಾರಸು ಮಾಡಿದಾಗ ರಾಜಕೀಯ ವಲಯಕ್ಕೆ ಸೇರಿದವರೆಂದು ತಿರಸ್ಕಾರ ಮಾಡಿರುವ ರಾಜ್ಯಪಾಲರು, ಶ್ಯಾಮ್‌ಭಟ್ ನೇಮಕ ಕುರಿತು ಶಿಫಾರಸು ಫೈಲ್‌ಗೆ ಸಹಿ ಮಾಡಬಾರದು. ಅದೇ ರೀತಿಯಲ್ಲಿ ಸರಕಾರ ಕೂಡಲೇ ಕಪಿಲ್ ಮೋಹನ್‌ರನ್ನು ತಮ್ಮ ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.







