ನೂತನ ಚಿಲ್ಲರೆ ವಹಿವಾಟು ನೀತಿ ಜಾರಿಗೆ ಸಂಪುಟ ಒಪ್ಪಿಗೆ
ಬೆಂಗಳೂರು, ಜೂ. 8: ರಾಜ್ಯದಲ್ಲಿನ ಚಿಲ್ಲರೆ ವಹಿವಾಟು ಮಾರುಕಟ್ಟೆಗೆ ಪ್ರೋತ್ಸಾಹ ನೀಡಲು ಹಾಗೂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೂತನ ಚಿಲ್ಲರೆ ವಹಿವಾಟು ನೂತನ ನೀತಿ (ಕರ್ನಾಟಕ ರೀಟೇಲ್ ಟ್ರೇಡ್ ಪಾಲಿಸಿ) ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಚಿಲ್ಲರೆ ವಹಿವಾಟು ನೀತಿ ಜಾರಿಗೆ ಮುನ್ನ ಹಲವಾರು ಇಲಾಖೆಗಳ ಅಭಿಪ್ರಾಯ ಹಾಗೂ ವಾಣಿಜ್ಯ ಮಂಡಳಿಯ ಸಲಹೆ ಹಾಗೂ ಮಾರ್ಗದರ್ಶನ ಪಡೆದಿದ್ದು, ನೂತನ ನೀತಿಯನ್ನು ಜಾರಿಗೆ ತರುವ ಮುನ್ನ ಸಾರ್ವಜನಿಕರ ಸಲಹೆಗಳನ್ನೂ ಪಡೆದು ಅನುಷ್ಠಾನಗೊಳಿಸಲಾಗುವುದು ಎಂದರು. ಚಿಲ್ಲರೆ ವಹಿವಾಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಲಾಗಿದೆ. ಚಿಲ್ಲರೆ ವಹಿವಾಟು ಮಾಡುವವರು ದವಸ-ಧಾನ್ಯಗಳ ಸಂಗ್ರಹ, ದಾಸ್ತಾನು ಮಿತಿಯನ್ನು ಹೆಚ್ಚಳ ಮಾಡುವುದರ ಜೊತೆಗೆ ನಾಗರಿಕರಿಗೆ ತೊಂದರೆ ಆಗದಂತೆ ಅಗತ್ಯ ಸೇವಾ ಕಾಯ್ದೆ(ಎಸ್ಮಾ) ಅನ್ವಯ ಕ್ರಮ ಜರಗಿಸುವ ಅಧಿಕಾರವನ್ನು ರಾಜ್ಯ ಸರಕಾರ ಹೊಂದಿದೆ ಎಂದು ಅವರು ತಿಳಿಸಿದರು.
ನಗರ ಪ್ರದೇಶಗಳಲ್ಲಿ ಚಿಲ್ಲರೆ ವಹಿವಾಟು ನಡೆಸುವ ಅಂಗಡಿಗಳನ್ನು ಕೈಗಾರಿಕಾ ಸ್ಥಾನಮಾನ ನೀಡಿ ಹಲವು ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದ ಅವರು, ಕೇಂದ್ರದ ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಚಿಲ್ಲರೆ ವಹಿವಾಟಿನಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಅವಕಾಶ ಲಭ್ಯವಾಗಲಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಿಂದ ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆಯು 87ಕೋಟಿ ರೂ.ವೆಚ್ಚದಲ್ಲಿ ಅಡ್ವಾನ್ಸ್‌ಡ್ ಪಾಲಿಮರ್ ಡಿಸೈನ್ ಅಂಡ್ ಡೆವೆಲಪ್‌ಮೆಂಟ್ ರೀಸರ್ಚ್ ಲ್ಯಾಬೋರೇಟರಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಶೇ.50ರಷ್ಟು ಅನುದಾನವನ್ನು ನೀಡಲಿದೆ ಎಂದು ಅವರು ಮಾಹಿತಿ ನೀಡಿದರು. ಮಾಹಿತಿದಾರರಿಗೆ ಬಹುಮಾನ: ಅನರ್ಹ ಪಡಿತರ ಚೀಟಿ ಹಾಗೂ ಪಡಿತರ ಪದಾರ್ಥಗಳ ಅನಧಿಕೃತ ದಾಸ್ತಾನು ಹಾಗೂ ಸಾಗಣೆ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವ ಯೋಜನೆಯನ್ನು ಮುಂದುವರಿಸಲು ಸಂಪುಟ ನಿರ್ಧರಿಸಿದೆ. ಸಾರ್ವಜನಿಕರ ಸಹಕಾರದಿಂದ ಪಡಿತರ ವಸ್ತುಗಳ ಅಕ್ರಮ ಸಾಗಣೆ ತಡೆಗಟ್ಟಲು ಬದ್ಧ ಎಂದು ಅವರು ತಿಳಿಸಿದರು.







