ಲಂಚ ಸ್ವೀಕಾರ: ಗ್ರಾಮಲೆಕ್ಕಿಗನ ಬಂಧನ

ಮಂಗಳೂರು, ಜೂ.8: ಲಂಚ ಸ್ವೀಕರಿಸುತ್ತಿದ್ದ ಗ್ರಾಮಕರಣಿಕನೋರ್ವನನ್ನು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಮಂಗಳವಾರ ಬಂಧಿಸಿದೆ.
ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಗೋಪಾಲಕೃಷ್ಣ ಟಿ. ಎಂಬವರು ತನ್ನ ತಾಯಿ ಪ್ರಭಾವತಿಯ ಅಕ್ರಮ ಸಕ್ರಮ ಭೂ ಮಂಜೂರಾತಿ ಅರ್ಜಿ ಶಿಫಾರಸು ಮಾಡಲು ಮಂಡೆಕೋಲು ಗ್ರಾಮದ ಗ್ರಾಮಲೆಕ್ಕಿಗ ಮಹೇಶ ಎಸ್. 57 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಗೋಪಾಲಕೃಷ್ಣ ಟಿ. ನೀಡಿದ ದೂರಿನ ಮೇರೆಗೆ ಭಷ್ಟಾಚಾರ ನಿಗ್ರಹ ದಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೂ.7ರಂದು ಭ್ರಷ್ಟಾಚಾರ ನಿಗ್ರಹ ದಳ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕ ಚೆನ್ನಬಸವಣ್ಣ ಎಸ್.ಎಸ್. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಸುಧೀರ್ ಹೆಗಡೆ ನೇತೃತ್ವದಲ್ಲಿ ತನಿಖಾಧಿಕಾರಿ ದಿನಕರ್ ಶೆಟ್ಟಿ ಗ್ರಾಮಲೆಕ್ಕಿಗ ಮಹೇಶ ಎಸ್.45 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಲಂಚ ನಿರೋಧಕ ಕಾಯಿದೆ 1988 ರನ್ವಯ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಎಸಿಬಿ ಸಿಬ್ಬಂದಿ ಎಚ್.ಸಿ. ಹರಿಪ್ರಸಾದ್, ಉಮೇಶ್, ಸಿಪಿಸಿ ಪ್ರಶಾಂತ್, ರಾಧಾಕೃಷ್ಣ, ಚಾಲಕ ಎಪಿಸಿ ರಾಕೇಶ್ ಪಾಲ್ಗೊಂಡಿದ್ದರು.







