6ರ ಹರೆಯದ ಪುಣೆ ಬಾಲಕಿಯಿಂದ ಪ್ರಧಾನಿಗೆ ಪತ್ರ
ಹೃದಯ ಶಸ್ತ್ರ ಚಿಕಿತ್ಸೆಗೆ ಕೂಡಲೇ ನೆರವು
ಪುಣೆ, ಜೂ.8: ಹೃದಯದ ಕಾಯಿಲೆಯೊಂದರಿಂದ ಬಳಲುತ್ತಿರುವ ಪುಣೆಯ 6ರ ಹರೆಯದ ಹುಡುಗಿಯೊಬ್ಬಳು ಆರ್ಥಿಕ ಸಹಾಯ ಅಪೇಕ್ಷಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಳು. ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ಅವರು ಸಹಾಯ ಧನವನ್ನು ಮಂಜೂರು ಮಾಡಿದ್ದು, ಅದರಿಂದ ಶಸ್ತ್ರ ಚಿಕಿತ್ಸೆಯನ್ನು ಪಡೆದ ಆಕೆ ಈಗ ಚೇತರಿಸಿಕೊಳ್ಳುತ್ತಿದ್ದಾಳೆ.
ಬಡ ಕುಟುಂಬದ ವೈಶಾಕಿ ಯಾದವ್ ಎಂಬ ಈ ಬಾಲಕಿಗೆ ಹೃದಯದಲ್ಲೊಂದು ರಂಧ್ರವಿತ್ತು. ಅರೆ ಕಾಲಿನ ಪೈಂಟಿಂಗ್ ವೃತ್ತಿಯ ಆಕೆಯ ತಂದೆಗೆ ಇದಕ್ಕೆ ದುಬಾರಿ ಶಸ್ತ್ರ ಚಿಕಿತ್ಸೆ ಮಾಡಿಸುವಷ್ಟು ಆರ್ಥಿಕ ಚೈತನ್ಯವಿರಲಿಲ್ಲ. ಔಷಧಿಗಾಗಿ ಮಗಳ ಆಟಿಕೆಗಳನ್ನು ಹಾಗೂ ಸೈಕಲನ್ನೂ ಅವರು ಮಾರಿದ್ದರು.
2ನೆ ತರಗತಿಯಲ್ಲಿ ಓದುತ್ತಿರುವ ವೈಶಾಲಿ, ತನ್ನ ಆರೋಗ್ಯ ಸ್ಥಿತಿ ಹಾಗೂ ಕುಟುಂಬ ಆರ್ಥಿಕ ಸ್ಥಿತಿಯನ್ನು ವಿವರಿಸಿ ಪ್ರಧಾನಿಗೆ ಪತ್ರ ಬರೆದು ಚಿಕಿತ್ಸೆಗೆ ನೆರವು ಯಾಚಿಸಿದ್ದರು.
ಒಂದೇ ವಾರದೊಳಗೆ ಪ್ರಧಾನಿ ಕಚೇರಿಯ ಪುಣೆಯ ಜಿಲ್ಲಾಡಳಿತವನ್ನು ಎಚ್ಚರಿಸಿ, ಬಾಲಕಿಗೆ ಸಹಾಯ ಒದಗಿಸುವಂತೆ ಮಾಡಿದೆ.
ಜಿಲ್ಲಾಡಳಿತವು ಬಾಲಕಿಯ ವಿಳಾಸವನ್ನು ಪತ್ತೆ ಹಚ್ಚಿ, ಅವಳನ್ನು ಕೂಡಲೇ ನಗರದ ರುಬಿ ಹಾಲ್ ಕ್ಲಿನಿಕ್‌ಗೆ ದಾಖಲಿಸಿತು. ಜೂ.2ರಂದು ಶುಲ್ಕ ರಹಿತವಾಗಿ ವೈಶಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.





