ವಿದೇಶಿ ನೆಲದಿಂದ ಭಾರತವನ್ನು ತೆಗಳಬೇಡಿ: ಪ್ರಧಾನಿ ಮೋದಿಗೆ ಶಿವಸೇನೆಯ ತಾಕೀತು

ಮುಂಬೈ,ಜೂ.8: ಭಾರತದಲ್ಲಿ ಭ್ರಷ್ಟಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಗಾಗಿ ಬುಧವಾರ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಬಿಜೆಪಿಯ ಪ್ರಮುಖ ಮಿತ್ರಪಕ್ಷ ಶಿವಸೇನೆಯು, ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ತೆಗಳುವುದರಿಂದ ದೂರವುಳಿಯುವಂತೆ ಅವರಿಗೆ ತಾಕೀತು ಮಾಡಿದೆ.
ಬಿಜೆಪಿ ಆಡಳಿತದ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿಯ ಹಗರಣಗಳನ್ನೂ ಗಾಂಧಿ ಕುಟುಂಬದ ತಲೆಗೆ ಕಟ್ಟಲಾದೀತೇ ಎಂದು ಅದು ವ್ಯಂಗ್ಯವಾಗಿ ಮೋದಿಯವರನ್ನು ಪ್ರಶ್ನಿಸಿದೆ.
ಪಂಚದೇಶಗಳ ಪ್ರವಾಸವನ್ನು ಕೈಗೊಂಡಿರುವ ಮೋದಿ ರವಿವಾರ ದೋಹಾದಲ್ಲಿ ಮಾತನಾಡುತ್ತ ಭಾರತದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತವಾಗಿ ಕಿತ್ತು ಹಾಕುವುದಾಗಿ ಘೋಷಿಸಿದ್ದರಲ್ಲದೆ, ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರುವ ಮೂಲಕ ತಾನು ಹಲವರ ನಿದ್ದೆಗೆಡಿಸಿದ್ದೇನೆ ಮತ್ತು ಸರಕಾರಿ ಯೋಜನೆಗಳಲ್ಲಿ ಸೋರಿಕೆ ಮತ್ತು ವಂಚನೆಯನ್ನು ತಡೆಗಟ್ಟುವ ಮೂಲಕ ವಾರ್ಷಿಕ 30,000 ಕೋ.ರೂ.ಗೂಅಧಿಕ ಹಣವನ್ನು ಉಳಿಸಿದ್ದೇನೆ ಎಂದು ಹೇಳಿದ್ದರು.
ಭಾರತ ಎಷ್ಟೊಂದು ಭ್ರಷ್ಟವಾಗಿದೆ ಎನ್ನುವುದರ ಬಗ್ಗೆ ಭಾಷಣ ಮಾಡಿದ್ದಕ್ಕಾಗಿ ಪ್ರಧಾನಿಯವರು ಪ್ರಶಂಸೆಗಳನ್ನು ಗಳಿಸಿದ್ದಾರೆ. ಇದು ವಿದೇಶಿ ನೆಲದಲ್ಲಿ ನಿಂತುಕೊಂಡು ನಮ್ಮ ದೇಶದ ಪ್ರತಿಷ್ಠೆಯನ್ನು ಹಾಳುಗೆಡವಿದಂತಾಗಿದೆ ಎಂದು ಶಿವಸೇನೆಯ ಮುಖವಾಣಿ ’ಸಾಮ್ನಾ’ದ ಬುಧವಾರದ ಸಂಚಿಕೆಯ ಸಂಪಾದಕೀಯವು ಬೆಟ್ಟು ಮಾಡಿದೆ.
ದೇಶದಲ್ಲಿ ಹೊಸ ಸರಕಾರವು ಅಧಿಕಾರಕ್ಕೆ ಬಂದು ಎರಡು ವರ್ಷಗಳ ಬಳಿಕವೂ ಜನರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆಂದರೆ ಯಾರನ್ನು ದೂರಬೇಕು ಎಂದು ಅದು ಮೋದಿಯವರನ್ನು ಪ್ರಶ್ನಿಸಿದೆ.
ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಮತ್ತು ಗಾಂಧಿ ಕುಟುಂಬದ ವಿರುದ್ಧ ಆರೋಪಗಳನ್ನು ಹೊರಿಸಿದ್ದು ಸಾಕು ಮತ್ತು ಅವರು ತಪ್ಪುಗಳನ್ನು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಇದು ಸಮಯವಾಗಿದೆ ಎಂದೂ ಸಂಪಾದಕೀಯವು ಹೇಳಿದೆ.







