ಶಿಕ್ಷಕ ಶಾಲೆಗೆ ಗೈರು: ಗ್ರಾಮಸ್ಥರಿಂದ ಡಿಡಿಪಿಐಗೆ ದೂರು

ಕಾರವಾರ, ಜೂ.8: ಸರಕಾರಿ ನೌಕರನೊಬ್ಬ ಎಷ್ಟು ದಿನ ರಜೆಯ ಮೇಲಿರಬಹುದು? ವಾರ, ಹದಿನೈದು ದಿನ, ತಿಂಗಳು.. ಇಲ್ಲೊಂದು ಪ್ರಕರಣದಲ್ಲಿ ಶಿಕ್ಷಕನೊಬ್ಬ ಕಳೆದ ಒಂಬತ್ತು ವರ್ಷಗಳಿಂದ ವೈದ್ಯಕೀಯ ರಜೆಯ ಮೇಲಿದ್ದಾರೆ. ಅವರ ಸ್ಥಾನಕ್ಕೆ ಸರಕಾರ ಬೇರೊಬ್ಬರನ್ನು ನೇಮಕ ಮಾಡದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ.
ಅಂಕೋಲಾ ತಾಲೂಕಿನ ಬ್ರಹ್ಮೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ ಇದು. ಗ್ರಾಮದಲ್ಲಿ ಸುಮಾರು 150 ಮನೆಗಳಿಗೆ ಎರಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಆದರೆ, ಊರಿಗಿರುವುದು ಒಂದೇ ಹಿರಿಯ ಪ್ರಾಥಮಿಕ ಶಾಲೆ. ಶಾಲೆಯಲ್ಲಿ 48 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 4 ಮಂಜೂರಿ ಹುದ್ದೆಗಳಿವೆ. ಅದರಲ್ಲಿ ಒಬ್ಬ ಶಿಕ್ಷಕ 2007ರಿಂದ ದೀರ್ಘಾವಧಿ ವೈದ್ಯಕೀಯ ರಜೆಯ ಮೇಲಿದ್ದಾರೆ. ಪದೋನ್ನತ ಮುಖ್ಯ ಶಿಕ್ಷಕರೊಬ್ಬರು ಕಳೆದ ವರ್ಷ ವರ್ಗಾವಣೆ ಹೊಂದಿದ್ದಾರೆ. ಸದ್ಯ ಒಂದರಿಂದ ಏಳನೆ ತರಗತಿ ಕಲಿಸಲು ಶಾಲೆಯಲ್ಲಿರುವುದು ಒಬ್ಬರೇ ಖಾಯಂ ಶಿಕ್ಷಕರು. ಎರಡು ವರ್ಷದಿಂದ ಇದೇ ಸಮಸ್ಯೆ ಇದ್ದು, ಶಾಲೆಗೆ ಬೇರೆ ಶಿಕ್ಷಕರನ್ನು ಪ್ರಭಾರದ ಮೇಲೆ ನೇಮಿಸಲಾಗುತ್ತಿದ್ದು ಅದು ವಿಳಂಬವಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ ಎಂಬುದು ಪಾಲಕರ ದೂರು. ಈ ಕುರಿತು ಗ್ರಾಮಸ್ಥರು 2015ರ ಜೂನ್‌ನಲ್ಲಿ ಡಿಡಿಪಿಐ ಕಚೇರಿಗೆ ಆಗಮಿಸಿ ದೂರು ನೀಡಿದ್ದರು. ಸುದೀರ್ಘ ರಜೆಯ ಮೇಲಿರುವ ಶಿಕ್ಷಕರಿಗೆ ಸ್ವಯಂ ನಿವೃತ್ತಿ ನೀಡುವ ಯೋಜನೆ ರೂಪಿಸಿ ಶಾಲೆಗೆ ಮತ್ತೊಬ್ಬ ಶಿಕ್ಷಕರನ್ನು ನೇಮಿಸುವುದಾಗಿ ಡಿಡಿಪಿಐ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭರವಸೆ ಈಡೇರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತೆ ಡಿಡಿಪಿಐ ಕಚೇರಿಗೆ ಆಗಮಿಸಿ ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಭಟ್, ಪ್ರಮುಖರಾದ ಕುಮಾರ ಜೆ. ಪಟಗಾರ, ಗಜಾನನ ಜಿ. ಭಟ್, ಗಣಪತಿ ಆರ್.ಭಟ್, ದಿನೇಶ್ ಎಸ್.ಪಟಗಾರ, ಸೋಮಶೇಖರ ನಾಯ್ಕ, ಮಂಜುನಾಥ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.





