ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆ ಕ್ಷೀಣಿಸುತ್ತಿದೆ: ದೇವರಾಜ್
ಮಕ್ಕಳ ದಾಖಲಾತಿ ಆಂದೋಲನಕ್ಕೆ ಚಾಲನೆ

ಚಿಕ್ಕಮಗಳೂರು, ಜೂ.8: ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಸರಕಾರಿ ಶಾಲೆಗಳು ಉಳಿಯಬೇಕು ಎಂದು ನಗರಸಭಾ ಅಧ್ಯಕ್ಷ ದೇವರಾಜ್ ಶೆಟ್ಟಿ ಹೇಳಿದ್ದಾರೆ.
ಅವರು ನಗರದ ಆಝಾದ್ ಪಾರ್ಕ್ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಶಾಲೆಗೆ ಮಕ್ಕಳ ದಾಖಲಾತಿ’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಖಾಸಗಿ ಶಾಲೆಗಳಲ್ಲೂ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಪೋಷಕರ ಒಣ ಪ್ರತಿಷ್ಠೆ ಹಾಗೂ ಇಂಗ್ಲಿಷ್ ವ್ಯಾಮೋಹದಿಂದಾಗಿ ನಾಡಿನಲ್ಲಿ ಕನ್ನಡ ಭಾಷೆ ಕ್ಷೀಣಿಸುತ್ತಿದೆ ಎಂದು ವಿಷಾಧಿಸಿದರು.
ಅದೃಷ್ಟಾವಶಾತ್ ಸರಕಾರಿ ಶಾಲೆಗಳಲ್ಲಿ ಮಾತ್ರ ಮಕ್ಕಳಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಇದರಿಂದಾಗಿ ನಾಡಿನಲ್ಲಿ ಅಲ್ಪಸ್ವಲ್ಪವಾದರೂ ಮಾತೃ ಭಾಷೆ ಉಳಿದಿದೆ. ಆದರೆ ದುರದೃಷ್ಟ ಎಂಬಂತೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ. ಸರಕಾರಿ ಶಾಲೆಗಳು ಉಳಿದರೆ ಮಾತ್ರ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯುತ್ತದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆ ನಂತರ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಜಯನಗರ, ಶಂಕರಪುರ, ನಾಯ್ಡು ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳ ಮನೆಗಳಿಗೆ ತೆರಳಿ ಸರಕಾರಿ ಶಾಲೆಗಳಲ್ಲಿ ನೀಡಲಾಗುವ ಉಚಿತ ಶಿಕ್ಷಣ ಮತ್ತು ವಿವಿಧ ಸೌಲಭ್ಯಗಳನ್ನು ವಿವರಿಸಿ, ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವಂತೆ ಪೋಷಕರ ಮನ ಒಲಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಎಸ್.ಇ.ಲೊಕೇಶ್ವರಾ ಚಾರ್, ನಾಗವೇಣಿ, ಸಾವಿತ್ರಮ್ಮ, ಜಯಂತಿ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.







