ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಶ್ರೀನಿವಾಸ ರಾಮಾನುಜಂ
ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು, ಜೂ.8: ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಲಿಮಿಟೆಡ್(ಟಿಸಿಎಸ್) ಅಕಾಡಮಿಕ್ ರಿಲೇಶನ್ ಮುಖ್ಯಸ್ಥ ಶ್ರೀನಿವಾಸ ರಾಮಾನುಜಂ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬ ವ್ಯಕ್ತಿಯು ಜಾಗೃತರಾಗಿ ಮರಗಿಡಗಳನ್ನು ಬೆಳೆಸುವ ಮೂಲಕ ಒಳ್ಳೆಯ ಪರಿಸರವನ್ನು ನಿರ್ಮಿಸಬೇಕು ಎಂದರು. ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ ನಿತ್ಯ ಪ್ರಾಣವಾಯುವನ್ನು ನೀಡುವ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದು ಕೇವಲ ಸಾಂಕೇತಿಕವಾಗಿ ಆಚರಿಸದೇ ಪ್ರತಿನಿತ್ಯದ ಕಾರ್ಯಕ್ರಮವಾಗಲಿ ಎಂದು ಹೇಳಿದರು.
ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಲಿಮಿಟೆಡ್ (ಟಿಸಿಎಸ್) ವಿವಿಧ ವಿಭಾಗಗಳ ಮುಖ್ಯಸ್ಥರಾದ ಸುನೀಲ್ ಜೋಸೆಫ್, ಅಭಿಲಾಶ್, ಬೆಂಜಿನ್, ಸ್ಟ್ಯಾನ್‌ಫೋರ್ಡ್, ಸಂತೋಷ್ ಉಪಸ್ಥಿತರಿದ್ದರು.





