ಇರುವೈಲ್‌ನಲ್ಲಿ ಕೃಷಿ ಸಂವಾದ, ಬೀಜೋಪಚಾರ ಆಂದೋಲನ

ಮೂಡುಬಿದಿರೆ, ಜೂ.8: ದ.ಕ. ಜಿಲ್ಲೆಯು ಫಲವತ್ತಾದ ಭೂಮಿ ಹಾಗೂ ವಿಶಿಷ್ಟ ಭೌಗೋಳಿಕ ಸನ್ನಿವೇಶವನ್ನು ಹೊಂದಿದೆ. ಇಲ್ಲಿನ ಅಭಿವೃದ್ಧಿಯ ಜೊತೆಜೊತೆಗೆ ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳ ಪಾಲಾಗುತ್ತಿರುವ ಕೃಷಿಭೂಮಿಯಲ್ಲಿ ಗರಿಷ್ಠ ಉತ್ಪಾದನೆಯನ್ನು ಸಾಧ್ಯವಾಗಿಸಬೇಕಾಗಿದೆ ಎಂದು ಮಂಗಳೂರು ತಾ. ಕೃಷಿಕ ಸಮಾಜದ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಕರೆ ನೀಡಿದ್ದಾರೆ.
ದ.ಕ.ಜಿ.ಪಂ.,ಕೃಷಿ ಇಲಾಖೆಯ ವತಿಯಿಂದ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕಾರ್ಯಕ್ರಮದನ್ವಯ ಮೂಡುಬಿದಿರೆ ಹೋಬಳಿ ಮಟ್ಟದಲ್ಲಿ ನಡೆದ ‘ಕೃಷಿ ಅಭಿಯಾನ’ದ ಸಮಾಪನದಂಗವಾಗಿ ಬುಧವಾರ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆವರಣದಲ್ಲಿ ನಡೆದ ‘ರೈತ ಸಂವಾದ, ತಾಂತ್ರಿಕ ಮಾಹಿತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಮಿಕರ ಸಮಸ್ಯೆ, ಬೆಳೆಗಳಿಗೆ ಸಿಗದ ಸಮರ್ಪಕ ಬೆಲೆ ಮೊದಲಾದ ಸಮಸ್ಯೆಗಳಿಂದ, ಸಾಮಾಜಿಕ, ಆರ್ಥಿಕ ಕಾರಣಗಳಿಂದ ಕೃಷಿಯಿಂದ ಇಂದಿನ ತಲೆಮಾರು ದೂರಸರಿಯುತ್ತಿರುವ ಸಂಕಟಮಯ ಸನ್ನಿವೇಶದ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ’ ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೃಷಿಕರಿಗೆ ನೀಡುತ್ತಿರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಲು ಕೃಷಿಕರು ಪ್ರಯತ್ನಿಸಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ.ಸದಸ್ಯೆ ರೀಟಾ ಕುಟಿನ್ಹಾ, ಕಿಂಡಿ ಅಣೆಕಟ್ಟುಗಳನ್ನು ನಾವು ಅಂದರೆ ರೈತರು ಸಮರ್ಪಕವಾಗಿ ನಿರ್ವಹಿಸದೇ ನಮ್ಮ ನೀರ ಸೆಲೆಗಳನ್ನು ನಾವೇ ಕಳೆದುಕೊಳ್ಳುವಂತಾಗಿದೆ ಎಂದು ವಿಷಾದಿಸಿದರು.
ಇರುವೈಲ್ ಗ್ರಾಪಂ ಸದಸ್ಯ ವಲೇರಿಯನ್ ಕುಟಿನ್ಹ ಮಾತನಾಡಿ, ಮಳೆ ನೀರು ಕೊಯ್ಲು ಮತ್ತು ಜಲ ಮರು ಪೂರಣದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಆದರೆ ಯಾವುದು ಹೆಚ್ಚು ಸಮರ್ಪಕ ಎಂಬುದನ್ನು ಪ್ರಾಯೋಗಿಕವಾಗಿ ನಮಗೆ ತೋರಿಸಿಕೊಡದೆ ಕೇವಲ ಬಾಷಣ ಮಾಡಿದರೆ ಸಾಲದು. ಕೆಲವು ಮಾದರಿಗಳನ್ನಾದರೂ ನಮ್ಮ ಊರಿನಲ್ಲಿ ಮಾಡಿ ತೋರಿಸಬೇಕು. ನಷ್ಟದಲ್ಲಿರುವ ಕೃಷಿರಂಗದ ಏಳಿಗೆಗಾಗಿ ಕೃಷಿಕರಿಗೆ ಉಚಿತ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಇವನ್ನೆಲ್ಲ ಉಚಿತವಾಗಿ ಕೊಡಿ ಎಂದು ಆಗ್ರಹಿಸಿದರು.
ಉಪ ಕೃಷಿ ನಿರ್ದೇಶಕ ಆರ್. ಮುನೇಗೌಡ ಮಾತನಾಡಿ, ಮಳೆ ನೀರು ಸಂಗ್ರಹಣೆ ಮತ್ತು ಜಲ ಮರುಪೂರಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.
ಮಂಗಳೂರು ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಹರೀಶ್ ಶೆಣೈ ಭತ್ತದ ಕೃಷಿ, ಕಳೆ ನಾಶಕ ಬಳಕೆ, ತೆಂಗಿನ ಮರ ಏರುವ ಯಂತ್ರ, ಸಂಬಂಧಿತ ತರಬೇತಿ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಬಶೀರ್ ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕಾ ಅಕಾರಿ ಸುಕುಮಾರ ಹೆಗ್ಡೆ ಅಡಿಕೆಗೆ ಬರುವ ಕೊಳೆರೋಗದ ನಿಯಂತ್ರಣಕ್ಕಾಗಿ ಬೋರ್ಡೋ ದ್ರಾವಣ ತಯಾರಿಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಇರುವೈಲು ಗ್ರಾ.ಪಂ. ಸದಸ್ಯರಾದ ಶಿವಪ್ಪ ಪೂಜಾರಿ, ಜಯರಾಮ ಬಂಗೇರ, ನಳಿನಾಕ್ಷಿ ಶೆಟ್ಟಿ, ಮೋಹಿನಿ, ಕುಸುಮಾ ಅತಿಥಿಗಳಾಗಿ ಬಾಗವಹಿಸಿದ್ದು ಇರುವೈಲು ಪರಿಸರದ ಕೃಷಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಕೃಷಿ ಅಧಿಕಾರಿ ನರಸಿಂಹ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಕುಲಕರ್ಣಿ ವಂದಿಸಿದರು.







