ಮೂಡುಬಿದಿರೆ: ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ಸಲಕರಣೆ ವಿತರಣೆ

ಮೂಡುಬಿದಿರೆ, ಜೂ.8: ಬಸ್ಸು ನಿಲ್ದಾಣ ಸಮೀಪವಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಸ್‌ಸ್ಟ್ಯಾಂಡ್ ಗೆಳೆಯರ ಬಳಗದ ವತಿಯಿಂದ ಉಚಿತ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸಲಾಯಿತು.
ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಮದರ್ ಇಂಡಿಯಾ ಅಬ್ದುಲ್ಲತೀಫ್, ಸಾಮಾಜಿಕ ಸೇವೆಯನ್ನು ಗಮನದಲ್ಲಿರಿಸಿಕೊಂಡು ಸರ್ವಧರ್ಮೀಯ ಯುವಕರು ಒಗ್ಗಟ್ಟಾಗಿ ತಂಡವನ್ನು ಕಟ್ಟಿಕೊಂಡಿದ್ದು, ಆ ಮೂಲಕ ಸಂಘಟನೆ ಸಕ್ರಿಯವಾಗಿರಲಿದೆ. ಬಡಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಾಯವಾಗುವಂತೆ ಇನ್ನಷ್ಟು ಕಾರ್ಯಕ್ರಮಗಳ ಅವಶ್ಯಕತೆಯಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಪ್ರಪುಲ್ಲಾ ಎಂ. ಶೆಟ್ಟಿ ಮಾತನಾಡಿ, ಬಡ ವಿದ್ಯಾರ್ಥಿಗಳೇ ಕಲಿಯುತ್ತಿರುವ ಶಾಲೆಯನ್ನು ಗುರುತಿಸಿದ ಸಂಘದ ಕಾರ್ಯಚಟುವಟಿಕೆ ಎಲ್ಲೆಡೆಗೆ ಹರಡಲಿ ಎಂದರು.
ಸಂಘದ ಗೌರವ ಸಲಹೆಗಾರರಾದ ಡಿ.ಎ. ಉಸ್ಮಾನ್, ಸಂಘದ ಅಧ್ಯಕ್ಷ ಅಶೋಕ್ ಆಳ್ವ, ಸಂಚಾಲಕ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರಾದ ರವಿರಾಜ್ ಭಂಡಾರಿ, ಇಬ್ರಾಹೀಂ ಬೂಟ್‌ಬಝಾರ್, ಪ್ರಧಾನ ಕಾರ್ಯದರ್ಶಿ ರಫೀಕ್ ವಿಶಾಲ್‌ನಗರ, ಜೊತೆಕಾರ್ಯದರ್ಶಿಗಳಾದ ಸುರೇಂದ್ರ ನೀರಳ್ಕೆ, ಸಂಘಟನಾ ಕಾರ್ಯದರ್ಶಿ ಸತೀಶ್ ಶೆಟ್ಟಿ ಹೊಸಂಗಡಿ, ಅವಿನಾಶ್ ಡೆಲ್ಲಾ ಉಪಸ್ಥಿತರಿದ್ದರು.







