ಜೂ.10ರಿಂದ 12ರವರೆಗೆ ‘ಕೊಲಾಜ್ ಚಿತ್ರ ಪಯಣ’
ಮಂಗಳೂರು, ಜೂ.8: ಬಂಟ್ವಾಳ ತಾಲೂಕಿನ ಕೊಳ್ನಾಡು ಮಂಚಿ ಸರಕಾರಿ ಪ್ರೌಢಶಾಲೆಯ 25 ವಿದ್ಯಾರ್ಥಿಗಳು ರಚಿಸಿರುವ ಚಿತ್ರಕಲಾ ಪ್ರದರ್ಶನ ‘ಕೊಲಾಜ್ ಚಿತ್ರಪಯಣ’ ಎಂಬ ಶೀರ್ಷಿಕೆಯಡಿ ಜೂ.10ರಿಂದ 12ರವರೆಗೆ ಪ್ರದರ್ಶನಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮಹಾಲಸ ಚಿತ್ರಕಲಾ ವಿದ್ಯಾಲಯದ ಉಪನ್ಯಾಸಕ ಎನ್.ಎಸ್. ಪತ್ತಾರ್, ಹಳ್ಳಿಯ ದೃಶ್ಯಗಳು, ಹಂಪಿಯ ಹಲವಾರು ಶಿಥಿಲಗೊಂಡ ಮಂದಿರದ ದೃಶ್ಯಗಳು, ಜಲಪಾತದ ದೃಶ್ಯ ಹಾಗೂ ಸ್ತಬ್ಧ ಚಿತ್ರಗಳ ಚಿತ್ರಕಲೆಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ ಎಂದು ಹೇಳಿದರು.
ಕತ್ತರಿಸುವುದು ಮತ್ತು ಅಂಟಿಸುವುದು ಕೊಲಾಜ್‌ನ ಅರ್ಥವಾಗಿದೆ. ವಿದ್ಯಾರ್ಥಿಗಳು ತಮ್ಮ ಕಲಾಕೃತಿಗಳಲ್ಲಿ ಬಣ್ಣವನ್ನು ಬಳಸದೆ ಕೇವಲ ಪತ್ರಿಕೆಗಳ ಬಣ್ಣದ ಕಾಗದಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಿರುವುದು ವಿಶೇಷತೆಯಾಗಿದೆ. ಮಂಚಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಚಿತ್ರಕಲಾಕೃತಿಗಳನ್ನು ವೃತ್ತಿಪರ ಕಲಾವಿದರಂತೆ ಪ್ರಸ್ತುತಪಡಿಸಲು ಮುಂದಾಗಿದ್ದು, ಎರಡು ಅಡಿ ಉದ್ದ ಹಾಗೂ 2.5 ಅಡಿ ಅಗಲದ ಚೌಕಟ್ಟಿನಲ್ಲಿ ಕಲಾಕೃತಿಗಳು ನಿರ್ಮಾಣವಾಗಿವೆ. ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಕರಾದ ತಾರನಾಥ ಕೈರಂಗಳ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ವಿ. ಶ್ರೀರಾಮಮೂರ್ತಿ ಹಾಗೂ ಶಿಕ್ಷಕ ವೃಂದ ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಹೇಳಿದರು. ಜೂ.10ರಂದು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಬೆಳಗ್ಗೆ 10:30ಕ್ಕೆ ರಂಗ ನಿರ್ದೇಶಕ ಜೀವನ್‌ರಾಮ್ ಸುಳ್ಯ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು.
ಅತಿಥಿಗಳಾಗಿ ಖ್ಯಾತ ಕಲಾವಿದರಾದ ದಿನೇಶ್ ಹೊಳ್ಳ, ಗಣೇಶ್ ಸೋಮಯಾಜಿ, ಕೆ. ಪುರುಷೋತ್ತಮ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವೈ. ಶಿವರಾಮಯ್ಯ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರದರ್ಶನದಲ್ಲ್ಲಿ 10ನೆ ತರಗತಿಯ ಹರಿಚರಣ್, ಕೃತಿಕಾ ಎ., ಗುರುಕುಮಾರ್, ಶರಣ್ಯ ರೈ, ರಶ್ಮಿತಾ ಎನ್., ಅಶ್ವಿತಾ ಕೆ., ಅಭಿಷೇಕ್, ಪುಷ್ಪಾ, ಆಶಲತಾ ಎನ್., ಮುಹಮ್ಮದ್ ಮಸೂದ್, ವಿನಯಶ್ರೀ ಕೆ., ಸೂರಜ್, ಪೂರ್ಣೇಶ್, 9ನೆ ತರಗತಿಯ ಸಾಗರ್, ಭವ್ಯಶ್ರೀ, ಪಾರ್ಥೇಶ್ ಎನ್., ನವ್ಯಶ್ರೀ ಎಂ., ವಂದನಾ ಕುಮಾರಿ, ಪ್ರತೀಕ್ಷಾ ಎನ್., ಪ್ರಜ್ವಲ್ ಕುಮಾರ್, 8ನೆ ತರಗತಿಯ ಸಹನ್ ಬಿ., ಅಂಕಿತ್, ಶ್ರೀನಿ ಪಾತೂರು, ಸೌಜನ್ಯಾ ರೈ, ದೃಶ್ಯಾರವರ ಚಿತ್ರಕಲೆಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಮಂಚಿ ಶಾಲಾ ಮುಖ್ಯೋಪಾಧ್ಯಾಯ ವಿ. ಶ್ರೀರಾಮ ಮೂರ್ತಿ, ಚಿತ್ರ ಕಲಾವಿದರಾದ ತಾರನಾಥ್ ಕೈರಂಗಳ್, ಪೆರ್ಮುದೆ ಮೋಹನ್ ಕುಮಾರ್ ಉಪಸ್ಥಿತರಿದ್ದರು.







