ಜೂ.11: ಜಾಗೃತಿ ಸೌಧ ಕಟ್ಟಡ ಉದ್ಘಾಟನೆ
ಬೆಳ್ತಂಗಡಿ, ಜೂ.8: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಜಾಗೃತಿ ಸೌಧ ಕಟ್ಟಡ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಜೂ.11ರಂದು ಉದ್ಘಾಟಿಸಲಿದ್ದಾರೆ ಎಂದು ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವ್ಯಸನಮುಕ್ತರಾಗಲು ಬಯಕೆಯಿದ್ದರೂ ಸಮುದಾಯದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಲು ಮುಜುಗರವಾಗುತ್ತಿರುವುದನ್ನು ಗಮನಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗೌಪ್ಯವಾಗಿ ಕುಡಿತ ಬಿಡಲು ಇಚ್ಛಿಸುವವರಿಗೆ ಹೊಸದೊಂದು ‘ಜಾಗೃತಿ ಸೌಧ ಕಟ್ಟಡ’ವನ್ನು ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ ವತಿಯಿಂದ ಶ್ರೀಮಂಜುನಾಥೇಶ್ವರ ಕ್ಷಯ ತಪಾಸಣಾ ಆಸ್ಪತ್ರೆ ಲಾಯಿಲದಲ್ಲಿ ನಿರ್ಮಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ನಡೆಸಲು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಗೆ ವಹಿಸಿದ್ದಾರೆ ಎಂದರು. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ 90 ಹಾಸಿಗೆಗಳು, ಸಭಾಭವನ, ಅತ್ಯಾಧುನಿಕ ಸೌಲಭ್ಯಗಳು, ವಿಶೇಷ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ. ಈ ಕೇಂದ್ರದಲ್ಲಿ ಮನೋರೋಗತಜ್ಞರ ನೇತೃತ್ವದಲ್ಲಿ ಶ್ರೀ ಧ.ಮ.ಆಸ್ಪತ್ರೆಯ ಸಹಕಾರದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುವುದು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಮಾಡಲಿದ್ದಾರೆ. ಸ್ವಾಸ್ಥ್ಯ ಸಂಕಲ್ಪದ ಮಾಹಿತಿ ನೀಡುವ ಕಿರುಚಿತ್ರ ಬಿಡುಗಡೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಶಾಸಕ ಕೆ.ವಸಂತ ಬಂಗೇರ ರಜತ ಸಂಭ್ರಮ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ನಿರ್ದೇಶಕ ವಿನ್ಸೆಂಟ್ ಪಾಯಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕೆ ಉಪಸ್ಥಿತರಿದ್ದರು.





