ನೈಜೀರಿಯದ ಮಾಜಿ ಫುಟ್ಬಾಲ್ ಆಟಗಾರ, ಕೋಚ್ ಸ್ಟೀಫನ್ ಕೇಶಿ ನಿಧನ

ಅಬುಜಾ, ಜೂ.8: ನೈಜೀರಿಯದ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಕೋಚ್ ಸ್ಟೀಫನ್ ಕೇಶಿ(54 ವರ್ಷ) ಬುಧವಾರ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಕೇಶಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ತನ್ನ ನಾಯಕತ್ವದ ಗುಣಗಳಿಂದ ಫುಟ್ಬಾಲ್ ಅಭಿಮಾನಿಗಳಿಂದ ‘ಬಿಗ್‌ಬಾಸ್’ ಎಂದೇ ಕರೆಯಲ್ಪಡುತ್ತಿದ್ದ ಸ್ಟೀಫನ್ ಕೇಶಿ ದಕ್ಷಿಣ ನೈಜೀರಿಯದ ಬೆನಿನ್ ಸಿಟಿಯಲ್ಲಿ ಹೃದಯಾಘಾತಕ್ಕೆ ಈಡಾದರು ಎಂದು ಮೂಲಗಳು ತಿಳಿಸಿವೆ.
‘‘ನನ್ನ ಸಹೋದರ ನಿಧನರಾಗಿದ್ದಾರೆ. ಅವರಲ್ಲಿ ಯಾವುದೇ ಅನಾರೋಗ್ಯದ ಲಕ್ಷಣವಿರಲಿಲ್ಲ. ಅವರು ಪತ್ನಿಯ ಸಾವಿನ ಆಘಾತದಿಂದ ಹೊರ ಬಂದಿರಲಿಲ್ಲ’’ ಎಂದು ಕೇಶಿ ಅವರ ಸಹೋದರ ಇಮ್ಯಾನುಯೆಲ್ ತಿಳಿಸಿದ್ದಾರೆ.
2013ರಲ್ಲಿ ಕೇಶಿ ನೈಜೀರಿಯ ತಂಡ ಆಫ್ರಿಕ ಕಪ್ ಆಫ್ ನೇಶನ್ಸ್ ಟ್ರೋಫಿ ಜಯಿಸಲು ಮಾರ್ಗದರ್ಶನ ನೀಡಿದ್ದರು. ಆಫ್ರಿಕ ಕಪ್ ಆಫ್ ನೇಶನ್ಸ್ ಟ್ರೋಫಿ ಜಯಿಸಿದ ಹಿನ್ನೆಲೆಯಲ್ಲಿ ನೈಜೀರಿಯ ತಂಡ 2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆದಿತ್ತು. ಕೇಶಿ ಆಟಗಾರ ಹಾಗೂ ಕೋಚ್ ಆಗಿ ನೈಜೀರಿಯ ತಂಡ ಪ್ರತಿಷ್ಠಿತ ಆಫ್ರಿಕ ಕಪ್ ಆಫ್ ನೇಶನ್ಸ್ ಟ್ರೋಫಿ ಜಯಿಸಿದ್ದ ಎರಡನೆೆ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಈಜಿಪ್ಟ್‌ನ ಮುಹಮ್ಮದ್ ಅಲ್-ಗೊಹರಿ ಈ ಸಾಧನೆ ಮಾಡಿದ್ದ ಮೊದಲ ಫುಟ್ಬಾಲ್ ಆಟಗಾರ.
19 ವರ್ಷಗಳ ಕಾಲ ನೈಜೀರಿಯ ತಂಡದಲ್ಲಿ ಪ್ರಮುಖ ಡಿಫೆಂಡರ್ ಆಗಿದ್ದ ಕೇಶಿ ಒಟ್ಟು 64 ಪಂದ್ಯಗಳನ್ನು ಆಡಿದ್ದು 9 ಗೋಲುಗಳನ್ನು ಬಾರಿಸಿದ್ದರು. ಅಮೆರಿಕದಲ್ಲಿ 1994ರಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ನೈಜೀರಿಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಕೇಶಿ ಟಾಗೊ ತಂಡ 2006ರ ವಿಶ್ವ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು.
ಕೇಶಿ ನಿಧನಕ್ಕೆ ಸಂತಾಪ:
ನೈಜೀರಿಯದ ಮಾಜಿ ಆಟಗಾರ ಕೇಶಿ ನಿಧನಕ್ಕೆ ನೈಜೀರಿಯ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಅಮಾಜು ಪಿನಿಕ್ ಸಂತಾಪ ವ್ಯಕ್ತಪಡಿಸಿದ್ದು, ‘‘ನಾವು ಸೂಪರ್ ಹೀರೋ ಒಬ್ಬರನ್ನು ಕಳೆದುಕೊಂಡಿದ್ದೇವೆ’’ ಎಂದು ಹೇಳಿದ್ದಾರೆ.
ಫಿಫಾದ ನೂತನ ಪ್ರಧಾನ ಕಾರ್ಯದರ್ಶಿ, ಪ್ರಸ್ತುತ ನೈಜೀರಿಯದಲ್ಲಿ ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಫಾತ್ಮಾ ಸವೌರಾ, ಕೇಶಿ ನಿಧನಕ್ಕೆ ಟ್ವಿಟರ್‌ನ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. ‘‘ಫುಟ್ಬಾಲ್ ಕುಟುಂಬ ಶ್ರೇಷ್ಠ ಸದಸ್ಯನೊಬ್ಬನನ್ನು ಕಳೆದುಕೊಂಡಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘‘ಕೇಶಿ ಓರ್ವ ನಿಜವಾದ ದಂತಕತೆ. ಅವರು ನನ್ನ ಹೃದಯದಲ್ಲಿ ಸದಾ ನೆಲೆಸಿದ್ದಾರೆ’’ ಎಂದು ನೈಜೀರಿಯದ ಸ್ಟ್ರೈಕರ್ ಇಮ್ಯಾನುಯೆಲ್ ಎಮೆನೈಕ್ ಹೇಳಿದ್ದಾರೆ.







