ಜನಾರ್ದನ ಪೂಜಾರಿ ವಿರುದ್ದ ಅಗೌರವ ಖಂಡನೀಯ: ಪುತ್ತೂರು ಬ್ಲಾಕ್ ಕಾಂಗ್ರೆಸ್

ಪುತ್ತೂರು, ಜೂ.9: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪತ್ರಿಕಾಗೋಷ್ಠಿ ನಡೆಸಿ ಅಗೌರವದ ಮಾತುಗಳನ್ನಾಡಿರುವುದು ಖಂಡನೀಯ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝುಲ್ ರಹೀಂ ಮತ್ತು ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್ ತಿಳಿಸಿದ್ದಾರೆ.
ಜನಾರ್ದನ ಪೂಜಾರಿ ಅವರು ಕಾಂಗ್ರೆಸ್‌ನ ರಾಷ್ಟ್ರ ಮಟ್ಟದ ನಾಯಕರಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿದ ಸಾರ್ವಕಾಲಿಕ ನಾಯಕ. ಅವರೇನಾದರೂ ತಪ್ಪು ಮಾಡಿದಲ್ಲಿ ಅಥವಾ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದಲ್ಲಿ ಅದನ್ನು ಪ್ರಶ್ನಿಸಲು ಪಕ್ಷದಲ್ಲಿ ವರಿಷ್ಠರು, ರಾಜ್ಯ ಮಟ್ಟದ ನಾಯಕರಿದ್ದಾರೆ. ಅಲ್ಲದೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿದೆ.
ಪಕ್ಷದಲ್ಲಿ ಯಾವುದೇ ಹುದ್ದೆಯಿಲ್ಲದ ಯಾರೋ ಒಬ್ಬರು ಪುಕ್ಕಟೆ ಪ್ರಚಾರ ಪಡೆಯುವುದಕ್ಕಾಗಿ ಪೂಜಾರಿ ಅವರ ವಿರುದ್ದ ಹೇಳಿಕೆ ನೀಡಿ ಅವಹೇಳನ ಮಾಡಿರುವುದು ಖಂಡನೀಯ ಎಂದು ಇತ್ತೀಚೆಗೆ ಪೂಜಾರಿ ವಿರುದ್ದ ಪತ್ರಿಕಾ ಹೇಳಿಕೆ ನೀಡಿದ್ದ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಬಗ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





