ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆಗಾಗಿ ನಿರ್ದೇಶನ: ಯು.ಟಿ.ಖಾದರ್

ಬೆಂಗಳೂರು.ಜೂ.9: ಮಳೆಗಾಲದಲ್ಲಿನ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.
ಉನ್ನತ ಆರೋಗ್ಯಾಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಿಸಲಿದ್ದು, ಇದಕ್ಕಾಗಿ ಈಗಿನಿಂದಲೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಿರುವುದಾಗಿ ತಿಳಿಸಿದರು.
ಡೆಂಗ್ಯೂ, ಚಿಕೂನ್ ಗುನ್ಯ,ಮಲೇರಿಯಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಶುರುವಾಗಿದ್ದು ಈ ಹಿನ್ನೆಲೆಯಲ್ಲಿ ಇದರ ತಡೆಗೆ ಸಮರೋಪಾದಿಯಲ್ಲಿ ಹೋರಾಡುವಂತೆ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸರಕಾರ ಆದೇಶಿಸಿದೆ.
ಡೆಂಗ್ಯೂ, ಚಿಕುನ್ ಗುನ್ಯಾ ರೋಗಗಳಿಗೆ ಚಿಕಿತ್ಸೆ ನೀಡಲು ದುಬಾರಿ ಶುಲ್ಕ ವಸೂಲು ಮಾಡಿದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಈ ವಿಷಯದಲ್ಲಿ ಏನೇ ಲೋಪವಾದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರು ನೀಡುವಂತೆ ಸಾರ್ವಜನಿಕರಿಗೆ ಸಲಹೆ ಮಾಡಲಾಗಿದೆ ಎಂದರು.
ಮತ್ತು ಸಾಂಕ್ರಾಮಿಕ ರೋಗಗಳ ತಡೆಗೆ, ಚಿಕಿತ್ಸೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ರಾಜ್ಯದ ಮೂವತ್ತು ಜಿಲ್ಲೆಗಳಿಗೂ ಉಸ್ತುವಾರಿ ಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು ಅನುದಿನದ ಬೆಳವಣಿಗೆಯನ್ನು ಗಮನಿಸುವುದು ಮತ್ತು ರೋಗ ತಡೆಗೆ ಅನಿವಾರ್ಯವಾದ ಕ್ರಮಗಳನ್ನು ಕೈಗೊಂಡ ಕ್ರಮಗಳ ಉಸ್ತುವಾರಿ ನೋಡಿಕೊಳ್ಳಬೇಕು ಎಂದರು.
ಕಳೆದ ವರ್ಷದ ಪರಿಸ್ಥಿತಿಗೆ ಹೋಲಿಸಿದರೆ ಈ ವರ್ಷ ಡೆಂಗ್ಯೂ,ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಐದು ತಿಂಗಳಲ್ಲಿ 834 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಅತ್ಯಂತ ಹೆಚ್ಚಿನ ಪ್ರಕರಣಗಳು ಮೈಸೂರಿನಲ್ಲಿ(118) ಪತ್ತೆಯಾಗಿವೆ.ಅದೇ ರೀತಿ 304 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು (53) ಪ್ರಕರಣಗಳು ದಾಖಲಾಗಿವೆ.
ಮಲೇರಿಯಾ ಪ್ರಕರಣಗಳು ಅತ್ಯಂತ ಹೆಚ್ಚು ಕಾಣಿಸಿಕೊಂಡಿದ್ದು ಒಟ್ಟಾರೆ 2302 ಪ್ರಕರಣಗಳ ಪೈಕಿ ಮಂಗಳೂರಿನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು (1430) ದಾಖಲಾಗಿವೆ ಎಂದು ಅವರು ವಿವರ ನೀಡಿದರು.
ಮೂರು ದಿನ ಜ್ವರ ಮಾತ್ರ ಬಂದರೆ ಜನ ಚಿಂತಿಸುವ ಅಗತ್ಯವಿಲ್ಲ.ಆದರೆ ಮೂರು ದಿನ ಕಳೆದರೂ ಜ್ವರ ನಿವಾರಣೆಯಾಗದಿದ್ದರೆ,ಮೈ-ಕೈ ನೋವು ಇದ್ದರೆ,ಗಂಟಲು ನೋವು ಇದ್ದರೆ ತಕ್ಷಣವೇ ಸಮೀಪದ ಸರಕಾರಿ ಆಸ್ಪತ್ರೆಗೆ ಕಡ್ಡಾಯವಾಗಿ ತೋರಿಸಲೇಬೇಕು.
ಅದೇ ರೀತಿ ಸರಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಸೂಕ್ತ ಚಿಕಿತ್ಸೆ ನೀಡಬೇಕು,ಪ್ರಯೋಗಾಲಯ ತಂತ್ರಜ್ಞರು ರೋಗ ಯಾವುದೆಂಬುದನ್ನು ಪತ್ತೆ ಹಚ್ಚಬೇಕು.ಒಂದು ವೇಳೆ ಎಲ್ಲಿ ಪ್ರಯೋಗಾಲಯ ತಂತ್ರಜ್ಞರಿಲ್ಲವೋ ಅಂತಲ್ಲಿ 104 ವ್ಯವಸ್ಥೆಯ ಮೂಲಕ ಪಕ್ಕದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರೋಗ ಪತ್ತೆ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದೇ ರೀತಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದಿದ್ದರೆ 108 ವಾಹನದ ಮೂಲಕ ರೋಗಿಗಳನ್ನು ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.
ಡೆಂಗ್ಯೂ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲೂಕು ಕೇಂದ್ರಗಳಲ್ಲಿ ರೋಗ ಪತ್ತೆ ಸೌಲಭ್ಯ ಇರುವುದಿಲ್ಲ.ಬದಲಿಗೆ ಜಿಲ್ಲಾ ಕೇಂದ್ರಗಳಲ್ಲಿ ಇರುತ್ತದೆ.ಹೀಗಾಗಿ ರೋಗದ ಪರೀಕ್ಷೆ ನಡೆಸಿದ ನಲವತ್ತೆಂಟು ಗಂಟೆಗಳ ಒಳಗಾಗಿ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಯೋಗಾಲಯಗಳಿಂದ ವರದಿ ತರಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ನಿಗಾ ವಹಿಸಬೇಕು.ಮತ್ತು ಪ್ರತಿ ಜಿಲ್ಲೆಯಲ್ಲೂ ಮೂರು ಸಂಚಾರಿ ಘಟಕಗಳಿರಬೇಕು.ಈ ಘಟಕಗಳು ಸ್ಥಳಕ್ಕೇ ಹೋಗಿ ಚಿಕಿತ್ಸೆ ನೀಡುವಂತಿರಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು ಇದಕ್ಕಾಗಿ ಇನ್ನೂರೈವತ್ತು ವಾಹನಗಳನ್ನು ಗುತ್ತಿಗೆಯ ಮೇಲೆ ಪಡೆಯಲು ಸೂಚನೆ ನೀಡಲಾಗಿದೆ ಎಂದರು.
ಕಳೆದ ವರ್ಷ ಡೆಂಗ್ಯೂ,ಚಿಕೂನ್ ಗುನ್ಯಾ ಹಾಗೂ ಮಲೇರಿಯಾದಂತಹ ಪ್ರಕರಣಗಳಿಗೆ ಚಿಕಿತ್ಸೆ ನೀಡುವಾಗ ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲು ಮಾಡಿರುವುದು ಸರಕಾರದ ಗಮನಕ್ಕೆ ಬಂದಿದೆ.ಇದೇ ಕಾರಣಕ್ಕಾಗಿ ನಿರ್ದಿಷ್ಟ ಪ್ರಮಾಣದ ಶುಲ್ಕವನ್ನು ಮಾತ್ರ ಪಡೆಯಲು ಅವುಗಳಿಗೆ ಸೂಚಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ರೋಗ ಪತ್ತೆಗೆ ಅಂತಿಮ ವರದಿಯನ್ನು ಪಡೆದರೆ ಸಾಕು.ಆದರೆ ಮಧ್ಯಂತರ ವರದಿ ಪಡೆಯುವ ನೆಪದಲ್ಲಿ ರೋಗಿಗಳಿಂದ ಹಣ ವಸೂಲು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದೇ ಕಾರಣಕ್ಕಾಗಿ ಮೊದಲನೇ ಪರೀಕ್ಷೆಗೆ ಇನ್ನೂರು ರೂ,ಎರಡನೇ ಪರೀಕ್ಷೆಗೆ ಐನೂರು ರೂ ಮಾತ್ರ ಪಡೆಯುವಂತೆ ಸೂಚಿಸಲಾಗಿದೆ.
ಸಾಮಾನ್ಯ ಪ್ಲೇಟ್ ಲೆಟ್‌ಗಳನ್ನು ನೀಡಲು ಒಂದು ಯೂನಿಟ್‌ಗೆ ಎಂಟು ನೂರೈವತ್ತು ರೂಪಾಯಿ ಮಾತ್ರ ಚಾರ್ಜು ಮಾಡಲಾಗುತ್ತದೆ.
ಇನ್ನುಳಿದಂತೆ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದ ಅವರು,ಡೆಂಗ್ಯೂ ಪ್ರಕರಣಗಳು ಕಂಡು ಬಂದಾಗ ಖಾಸಗಿ ಆಸ್ಪತ್ರೆಗಳು ಸರಕಾರಕ್ಕೆ ಮಾಹಿತಿ ನೀಡಬೇಕು.ಹಾಗೆ ಮಾಹಿತಿ ನೀಡದವರಿಗೆ ನೋಟೀಸ್ ನೀಡಲಾಗಿದೆ ಎಂದರು.
ಈ ಮಧ್ಯೆ ನಗರಾಭಿವೃದ್ಧಿ ಇಲಾಖೆ,ಪೌರಾಡಳಿತ ಇಲಾಖೆ ಸೇರಿದಂತೆ ಸರಕಾರದ ಹಲವು ಸಂಸ್ಥೆಗಳು ನಮ್ಮ ಜತೆ ಕೈ ಜೋಡಿಸಲು ಮನವಿ ಮಾಡಿದ್ದು ಎಲ್ಲರೂ ಸೇರಿ ವಿವಿಧ ಹಂತಗಳಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಇದೇ ರೀತಿ ರಾಜ್ಯದಲ್ಲಿ ಎಲ್ಲೇ ಡೆಂಗ್ಯೂ,ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ರೋಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಅನ್ನಿಸಿದರೆ ಡಾ॥ಪ್ರಕಾಶ್ ಅವರನ್ನು 94498-43150 ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಿ ದೂರು ನೀಡಬಹುದು ಎಂದರು.
ಈ ಮಧ್ಯೆ ಜೂನ್ 15 ರಿಂದ 21 ರವರೆಗೆ ರಾಜ್ಯಾದ್ಯಂತ ಸ್ವಚ್ಚತಾ ಆಂದೋಲನವನ್ನು ನಡೆಸಲಾಗುತ್ತಿದ್ದು ಕೊಳೆಗೇರಿಗಳು,ಕಟ್ಟಡ ನಿರ್ಮಾಣ ಪ್ರದೇಶಗಳು, ಸರಕಾರಿ ಕಛೇರಿಗಳು,ಸಾರ್ವಜನಿಕ ಸ್ಥಳಗಳು,ಶಾಲಾ-ಕಾಲೇಜುಗಳು,ಬಸ್ ನಿಲ್ದಾಣ ಸೇರಿದಂತೆ ಎಲ್ಲ ಕಡೆ ಸ್ಥಳೀಯರು ಮತ್ತು ಆರೋಗ್ಯ ಇಲಾಖೆಯ ಸಹಕಾರದಿಂದ ಸ್ವಚ್ಚಗೊಳಿಸಲಾಗುವುದು ಎಂದರು.
ಪ್ರತಿ ದಿನ ಸಂಜೆ ರಾಜ್ಯದಲ್ಲಿ ದಾಖಲಾದ ಡೆಂಗ್ಯೂ,ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ರೋಗಿಗಳ ಕುರಿತು ಮಾಹಿತಿ ಒದಗಿಸುವುದಾಗಿಯೂ ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.







