'ಲಿಟ್ಲ್‌ಬ್ಲಾಕ್‌ಬುಕ್'' ಕೃತಿ ಬಿಡುಗಡೆ

ಮಂಗಳೂರು,ಜೂ 9: ನಗರದ ವಿಕಾಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ಡಾ.ಅನಂತ್ ಪ್ರಭು ರಚಿಸಿದ ಲಿಟ್ಲ್ ಬ್ಲಾಕ್‌ಬುಕ್‌ನ್ನು ಕೇಂದ್ರ ವಾಣಿಜ್ಯ ಇಲಾಖೆಯ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಹರಿಭಾಯಿ ಪಿ. ಚೌದರಿ ಬುಧವಾರ ಬಿಡುಗಡೆಗೊಳಿಸಿದರು.
ಶಿಕ್ಷಕರ ಮತ್ತು ಉಪನ್ಯಾಸಕರ ಶೈಕ್ಷಣಿಕ ಸಿದ್ಧತೆಗೆ ಪೂರಕವಾಗಿ 200 ಪುಟದ ಲಿಟ್ಲ್‌ಬ್ಲಾಕ್ ಬುಕ್ ಕೃತಿಯ 5,000 ಪ್ರತಿಗಳನ್ನು ಉಚಿತವಾಗಿ ವಿತರಿಸುವುದಾಗಿ ವಿಕಾಸ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಘೋಷಿಸಿದರು. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಹೆಚ್ಚು ಪ್ರತಿ ಬೇಕಾದಲ್ಲಿ ಒದಗಿಸಲಾಗುವುದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಟ್ರಸ್ಟಿಗಳಾದ ಸೂರಜ್ ಕಲ್ಯ, ಸಫಾನ್ ಸೈಯದ್ ಮತ್ತು ಪ್ರೊ. ಗೋಪಾಲ್ ರೆಡ್ಡಿ ಉಪಸ್ಥಿತರಿದ್ದರು.
ಶಿಕ್ಷಕರು ಉಚಿತವಾಗಿ ಈ ಪುಸ್ತಕವನ್ನು ಪಡೆಯಲು ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜ್‌ನ್ನು ಸಂಪರ್ಕಿಸಬಹುದು. ಶಿಕ್ಷಕರೊಬ್ಬರಿಗೆ ಒಂದು ಪ್ರತಿಯನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಪುಸ್ತಕದ ವಿಶೇಷತೆ
ಅತ್ಯುತ್ತಮ ಶಿಕ್ಷಕ ಹಾಗೂ ಉತ್ತಮ ತರಗತಿಯನ್ನು ನಡೆಸಲು ನಾಲ್ಕು ಅಂಶಗಳು ಮುಖ್ಯವಾಗುತ್ತವೆ. 1.ಜ್ಞಾನ 2 ಜ್ಞಾನವನ್ನು ಕೌಶಲ್ಯವಾಗಿ ಪರಿವರ್ತಿಸುವುದು, 3.ಪಠ್ಯಕ್ಕೆ ಸಂಬಂಧಿಸಿದಂತೆ ಬೋಧನಾ ಸಾಮಾಗ್ರಿಯನ್ನು ರಚಿಸುವುದು. 4.ವಿದ್ಯಾರ್ಥಿಗಳನ್ನು ಗೌರವಿಸುವುದು.
ಈ ನಾಲ್ಕು ಅಂಶಗಳನ್ನು ಹೊಂದಿರದ ಶಿಕ್ಷಕರು ವಿಫಲತೆಯನ್ನು ಹೊಂದುತ್ತಾರೆ. ಲಿಟ್ಲ್ ಬ್ಲಾಕ್ ಬುಕ್ ಈ ನಾಲ್ಕು ಅಂಶಗಳನ್ನು ಪುಷ್ಟೀಕರಿಸುತ್ತದೆ. ತರಬೇತಿ ಮತ್ತು ಬೋಧನಾ ಕ್ಷೇತ್ರದಲ್ಲಿ ಲೇಖಕರಿಗಿದ್ದ ಹತ್ತು ವರ್ಷದ ಅನುಭವದ ಮೇರೆಗೆ ವಿದ್ಯಾರ್ಥಿಗಳನ್ನು ಪ್ರೇರಣೆ ಮಾಡುವಲ್ಲಿ ಉಪಯುಕ್ತವಾಗುವ ಹಾಗೆ ಕೆಲವೊಂದು ಅಂಶಗಳನ್ನು ಈ ಪುಸ್ತಕದಲ್ಲಿ ಸೇರಿಸಿದ್ದಾರೆ.
2014ರ ಮೇ ತಿಂಗಳಲ್ಲಿ ವಿದ್ಯಾರ್ಥಿಗಳಿಗಾಗಿ ಲಿಟ್ಲ್ ಬ್ಲಾಕ್ ಬುಕ್‌ನ್ನು ಬರೆದಿದ್ದರು. ಈ ಪುಸ್ತಕದ 5,000 ಪ್ರತಿಗಳು ಈಗಾಗಲೇ ವಿದ್ಯಾರ್ಥಿ ಸಮುದಾಯದಲ್ಲಿ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗಿ, ಈಗಲೂ ಕೂಡ ಮಾರಾಟವಾಗುತ್ತಿವೆ. ಈ ಪುಸ್ತಕವನ್ನು ಅಲೋಶಿಯಸ್ ಕಾಲೇಜಿನ ನಿರ್ದೇಶಕ ಫಾ. ಡೆಂಜಿಲ್, ಎಕ್ಸ್‌ಪರ್ಟ್ ಕಾಲೇಜು ಅಧ್ಯಕ್ಷ ನರೇಂದ್ರ ನಾಯಕ್ ಹಾಗೂ ಕಾಸ್ಮೋಸ್ ಟ್ಯುಟೋರಿಯಲ್ಸ್‌ನ ಪ್ರೊ.ನದೀಮ್ ಕಾಸ್ಮೋಸ್ ಪ್ರಶಂಸಿಸಿದ್ದರು.







